ಬಂಟ್ವಾಳ: ಒಂದು ತಿಂಗಳ ಉಪವಾಸ ವ್ರತ ಶನಿವಾರ ಮುಕ್ತಾಯವಾಗಿದ್ದು ರವಿವಾರ ತಾಲೂಕಿನಾದ್ಯಂತ ಮುಸ್ಲಿಮರು ಸರಳವಾಗಿ ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದರು. ಕೊರೋನ ಸೋಂಕು ಹಾಗೂ ಲಾಕ್ ಡೌನ್ ನಿಂದ ಈ ಬಾರಿಯ ಈದುಲ್ ಫಿತ್ರ್ ಅನ್ನು ಸರಳವಾಗಿ ಆಚರಿಸುವಂತೆ ಕರಾವಳಿ ಭಾಗದ ಇಬ್ಬರು ಖಾಝಿಗಳು ಸಮುದಾಯಕ್ಕೆ ಮನವಿ ಮಾಡಿದ್ದರು. ಅದರಂತೆ ಮುಸ್ಲಿಮರು ಹೊಸ ಉಡುಪು ಧರಿಸದೆ ಸರಳವಾಗಿ ಈದ್ ಆಚರಿಸಿದರು.
ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲು ಈದ್ ಗೆ ಯಾರೂ ಬಟ್ಟೆಬರೆ ಖರೀದಿಸಲು ತೆರಳದಂತೆ ಸಮುದಾಯದ ನಡುವೆ ಸಮುದಾಯದ ನಾಯಕರು ಭಾರೀ ಜಾಗೃತಿ ಮೂಡಿಸಿದ್ದರಿಂದ ಮುಸ್ಲಿಮರು ಬಟ್ಟೆಬರೆ ಖರೀದಿಸದೆ ಸರಳ ಈದ್ ಆಚರಣೆಗೆ ನಿರ್ಧರಿಸಿದ್ದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ಮಸೀದಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿರುವುದರಿಂದ ಮುಸ್ಲಿಮರು ಈದ್ ನಮಾಝ್ ಅನ್ನು ಮನೆಯಲ್ಲೇ ನಿರ್ವಹಿಸಿದರು. ರವಿವಾರ ಅನಗತ್ಯ ವಾಹನ ಸಂಚಾರಕ್ಕೆ ಸರಕಾರ ನಿರ್ಬಂಧ ಹಾಕಿರುವುದರಿಂದ ಈದ್ ದಿನದ ಸಂಪ್ರದಾಯದಂತೆ ಈ ಬಾರಿ ಯಾರೂ ಬಂದು ಮಿತ್ರರ ಮನೆಗಳಿಗೆ ತೆರಳಿ ಶುಭ ಹಾರೈಸುವುದು ಇಲ್ಲವಾಗಿದೆ.
ಈದ್ ಪ್ರಯುಕ್ತ ನೀಡುವ ಫಿತ್ರ್ ಝಕಾತ್ (ದಾನ) ಅನ್ನು ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗೆ ವರೆಗೆ ಮುಸ್ಲಿಮರು ನೀಡುತ್ತಿದ್ದರು. ಹಬ್ಬಕ್ಕೆ ತಮ್ಮ ಮನೆಯಲ್ಲಿ ವಿಶಿಷ್ಟ ಅಡುಗೆಯನ್ನು ತಯಾರಿಸಿ ನೆರೆಮನೆಯ ಜನರೊಂದಿಗೆ ಸವಿದು ಹಬ್ಬವನ್ನು ಸಂಭ್ರಮಿಸಿದರು.

By suddi9

Leave a Reply

Your email address will not be published. Required fields are marked *