ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಿಂದ ಝಾರ್ಖಂಡ್ಗೆ ತೆರಳಲು ಮುಂದಾಗಿ ಬಂಟವಾಳ ಬಂಟರ ಭವನದಲ್ಲಿ ಕಳೆದ ಎರಡು ದಿನದಿಂದ ತಂಗಿರುವ ಕಾರ್ಮಿಕರಿಗೆ ಬಂಟ್ವಾಳ ತಾಲೂಕಾಡಳಿತದ ಮೂಲಕ ಗುರುವಾರ ಮೊಬೈಲ್ ಎಟಿಎಂ ವ್ಯವಸ್ಥೆ ಕಲ್ಪಿಸಲಾಯಿತು. 
ಬಂಟರ ಭವನದಲ್ಲಿ ತಂಗಿರುವ ನೂರಾರು ಕಾರ್ಮಿಕರು ಇದರ ಸದುಪಯೋಗವನ್ನು ಪಡೆದುಕೊಂಡರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ರವರು ಊಟೋಪಚಾರದ ವ್ಯವಸ್ಥೆಯನ್ನು ಕಲ್ಪಿಸಿದರು.ಶಾಸಕರ ನೇತೃತ್ವದಲ್ಲಿ ಬಂಟ್ವಾಳ ತಾಲೂಕು ಆಡಳಿತ, ಪೋಲಿಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿ- ಸಿಬ್ಬಂದಿ ವರ್ಗ ಮಂಗಳವಾರ ಮಧ್ಯರಾತ್ರಿಯಿಂದಲೇ ಕಾರ್ಮಿಕರಿಗೆ ಯಾವುದೇ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿದರು.
ಗುರುವಾರವು ಶಾಸಕ ರಾಜೇಶ್ ನಾಯ್ಕ್ ಅವರು ಬಂಟರ ಭವನಕ್ಕೆ ಭೇಟಿ ನೀಡಿ ಕಾರ್ಮಿಕರ ಯೋಗ ಕ್ಷೇಮವನ್ನು ವಿಚಾರಿಸಿದರು.ತಹಶೀಲ್ದಾರ್ ರಶ್ಮಿ.ಎಸ್.ಆರ್, ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ,ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ ,ಪಕ್ಷದ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು,ರಮಾನಾಥ ರಾಯಿ ಮೊದಲಾದವರಿದ್ದರು.
ಬಂಟವಾಳದ ಬಂಟರ ಭವನವನ್ನು ಕಾರ್ಮಿಕರ ವಾಸ್ತವ್ಯಕ್ಕಾಗಿ ನೀಡಿ ಸಹಕರಿಸಿದ ಸಂಘದ ಅಧ್ಯಕ್ಷ ನಗ್ರಿ ವಿವೇಕ್ ಶೆಟ್ಟಿ , ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಹಾಗೂ ಎಲ್ಲ ಪದಾಧಿಕಾರಿಗಳಿಗೆ ಈ ಸಂದರ್ಭ ಶಾಸಕರು ಕೃತಜ್ಞತೆ ಸಲ್ಲಿಸಿದರು. ಮಂಗಳವಾರ ರಾತ್ರಿ ಝಾರ್ಖಂಡ್ ಮೂಲದ ಕಾರ್ಮಿಕರು ಪಾದಯಾತ್ರೆ ಮೂಲಕ ಊರಿಗೆ ತೆರಳಲು ಮುಂದಾಗಿದ್ದರು.ಇವರನ್ನು ಬಂಟವಾಳ ಬಂಟರಭವನ ಬಳಿ ತಡೆದು ಮನವೊಲಿಸಿ ಇಲ್ಲಿಯೆ ಉಳಿದು ಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗಿತ್ತು.
