ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಜೋಸ್ ಅಲುಕ್ಕಾಸ್ ಆಭರಣ ಮಳಿಗೆ ಇವರು, ಸಾರ್ವಜನಿಕರ ಸ್ವಾಸ್ಥ್ಯ ಕ್ಷೇಮಾರ್ಥ, ಕೊರೊನಾ ಸೋಂಕು ಹರಡದಂತೆ ತಡೆಯಲು, ಮುನ್ನೆಚ್ಚರಿಕೆಯ ಕ್ರಮವಾಗಿ, ಶುದ್ಧೀಕಾರಕ ದ್ರಾವಣ ಕೇಂದ್ರವನ್ನು ನಗರದ ಮಾರುಥಿ ವೀಥಿಕಾ ಇಲ್ಲಿಯ ಆಯಾಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿದ್ದಾರೆ. ಕೇಂದ್ರದ ಉದ್ಘಾಟನೆಯು ಶನಿವಾರ, ತಹಶಿಲ್ದಾರ್ ಪ್ರದೀಪ್ ಕುರ್ಡೆಕರ್ ಅವರಿಂದ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೊನಾ ಸೋಂಕು ಹರಡದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಸಾರ್ವಜನಿಕರ ಆರೋಗ್ಯದ ಕ್ಷೇಮಾರ್ಥ ಸ್ಥಾಪಿಸಿರುವ ಶುದ್ಧೀಕಾರಕ ದ್ರಾವಣ ಕೇಂದ್ರವು ಈ ತುರ್ತು ಸಮಯದಲ್ಲಿ ಅತಿ ಅಗತ್ಯಹೊಂದಿದೆ ಎಂದರು. ನಾಗರಿಕ ಸಮಿತಿಯ ಸಾಮಾಜಿಕ ಕಳಕಳಿಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ದಾನಿಗಳ ಸಹಕಾರ ದೊರೆತರೆ, ನಗರದಲ್ಲಿ ಅತಿಹೆಚ್ಚು ಜನ ಸಂಚಾರ ಇರುವ ಸ್ಥಳಗಳನ್ನು ಗುರುತಿಸಿ, ಅಲ್ಲಿಯ ಆಯಾಕಟ್ಟಿನ ಸ್ಥಳದಲ್ಲಿ ಶುದ್ಧೀಕಾರಕ ದ್ರಾವಣ ಕೇಂದ್ರ ಸ್ಥಾಪಿಸಲು ಸಂಕಲ್ಪಿಸಿದ್ದೇವೆ ಎಂದು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜೋಸ್ ಅಲುಕ್ಕಾಸ್ ಆಭರಣ ಮಳಿಗೆಯ ಗೋಪಾಲ್, ಸಮಿತಿಯ ಸಹಸಂಚಾಲಕ ತಾರಾನಾಥ್ ಮೇಸ್ತ ಶಿರೂರು, ಅಭಿಜಿತ್ ಕಾಮತ್, ರವಿಚಂದ್ರನ್, ರಾಘವೇಂದ್ರ ಪ್ರಭು ಕರ್ವಾಲು ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಉದ್ಯಮಿ ಪಿ. ಸುದರ್ಶನ್ ಕಾಮತ್ ಅವರು, ಯಂತ್ರ, ಪರಿಕರಗಳನ್ನು ಉಚಿತವಾಗಿ ಒದಗಿಸಿದರು.

