ಬೆಳ್ತಂಗಡಿ: ಭೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುವ ಚೆಸ್ ಕ್ರೀಡೆಯನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಧರ್ಮಸ್ಥಳದ ಶಾಂತಿವನ ಟ್ರಸ್ಟ್ 2015-16 ನೇ ವರ್ಷದಿಂದ ಜಿಲ್ಲೆಯ ಪ್ರತೀ ಶಾಲೆಗಳ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಯೋಗದೊಂದಿಗೆ ಚೆಸ್ನ್ನು ಕಲಿಸುವ ನಿಟ್ಟಿನಲ್ಲಿ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಧರ್ಮಸ್ಥಳ ಧಮರ್ಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ಬೆಳ್ತಂಗಡಿ ನ್ಯಾಯಾಲಯ ಮತ್ತು ವಕೀಲರ ಸಂಘದ ಸ್ವರ್ಣ ಮಹೋತ್ಸವದ ಅಂಗವಾಗಿ 5 ದಿನಗಳ ಕಾಲ ಅಖಿಲ ಭಾರತ ಚೆಸ್ ಫೆಡರೇಶನ್ ಮತ್ತು ಯುನೈಟೆಡ್ ಕರ್ನಾಟಕ ಅಸೋಸಿಯೇಶನ್ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಟ್ಟದ ಫಿಡೆ ಶ್ರೇಯಾಂಕಿತ ಲಾಯರ್ಸ್ ಕಪ್ ಮುಕ್ತ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಚೆಸ್ ಎದುರಾಳಿಯ ಶಕ್ತಿಯನ್ನು ಗುರುತಿಸಿ ಆತ್ಮವಿಶ್ವಾಸದಿಂದ ಆಡುವ ಆಟವಾಗಿದೆ. ಭಾರತಕ್ಕೆ ಚೆಸ್ ಹೊಸದಲ್ಲ. ಈ ಆಟ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ಖ್ಯಾತಿಗೊಂಡಿದೆ. ಎದುರಾಳಿಯ ಶಕ್ತಿಯನ್ನು ಗುರುತಿಸಿ ಎದುರಿಸಿ ಗೆಲ್ಲಬೇಕಾದರೆ ಬುದ್ಧಿ ಬೇಕು. ಯವಜನರು ಸೋಲಿನಿಂದ ನಿರಾಶರಾಗಬೇಕಿಲ್ಲ. ಸೋಲೆ ಗೇಲುವಿನ ಮೆಟ್ಟಿಲು. ಆತ್ಮಶೋಧನೆ ಮಾಡಿಕೊಂಡು ಮುಂದುವರಿಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕ್ರೀಡಾ ಮತ್ತು ಯುವಜನ ಸೇವಾ ಖಾತೆ ಸಚಿವ ಅಭಯಚಂದ್ರ ಜೈನ್ ಮಾತನಾಡಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದ 2015-16 ರಿಂದ ಚೆಸ್ ಕಲಿಸುವ ಏರ್ಪಾಡು ಮಾಡಲಾಗುವುದು. ಈ ಬಗ್ಗೆ ಶಿಕ್ಷಣ ಸಚಿವರಲ್ಲಿ ಮಾತುಕತೆ ನಡೆಸಲಾಗುವುದು. ಯುವಜನರಲ್ಲಿ ದೈಹಿಕ ಕ್ಷಮತೆ ಹೆಚ್ಚಿಸುವ ನಿಟ್ಟಿನಿಲ್ಲಿ 2015 ವರ್ಷದಲ್ಲಿ ಉಜಿರೆಯಲ್ಲಿ ಸರಕಾರದ ವತಿಯಿಂದ ಜಿಮ್ ತೆರೆಯಲಾಗುವುದು ಎಂದ ಅವರು ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಚೆಸ್ ಪಂದ್ಯಾಟಕ್ಕೆ ರೂ. ಒಂದು ಲಕ್ಷ ನೀಡುವುದಾಗಿ ಪ್ರಕಟಿಸಿದರು.
ಗ್ರ್ಯಾಂಡ್ ಮಾಸ್ಟರ್ ಪ್ರವೀಣ್ ತಿಪ್ಸೆ ಮಾತನಾಡಿ ಗುಜರಾತ್ನಲ್ಲಿ 5ವರ್ಷದ ಮಕ್ಕಳಿಗೆ ಚೆಸ್ ಆಟದ ಅಭ್ಯಾಸ ಆಗುವಂತೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಮಹಾರಾಷ್ಟ್ರ ಸರಕಾರವೂ ಈ ಕ್ರೀಡೆಗೆ ಅತಿ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಕರ್ನಾಟಕದಲ್ಲೂ ಗುಜರಾತ್ ಮಾದರಿ ಅನುಷ್ಠಾನಗೊಳ್ಳಬೇಕು. ಯೋಗ್ಯವಾದ ನ್ಯಾಯದಾನ, ಕೌಶಲ್ಯದ ಉನ್ನತಿಗೆ ಚೆಸ್ ಸಹಾಯಕಾರಿ ಎಂದು ಸಾಬೀತಾಗಿದೆ. ಹೆಚ್ಚಿನ ಉನ್ನತ ನ್ಯಾಯಾಧೀಶರುಗಳು ಚೆಸ್ ಪ್ರವೀಣರೇ ಆಗಿದ್ದಾರೆ. ಸ್ಮರಣ ಶಕ್ತಿ, ಬುದ್ದಿಮತ್ತೆ ಹೆಚ್ಚಲು ಈ ಆಟ ಉಪಯುಕ್ತ ಎಂದ ಅವರು ಚೆಸ್ನ ಪ್ರತಿಯೊಂದೂ ಸ್ಪರ್ಧೆಯೂ ಪರೀಕ್ಷೆಯಾಗಿದೆ ಎಂದರು.
ವೇದಿಕೆಯಲ್ಲಿ ಶಾಸಕ ಕೆ. ವಸಂತ ಬಂಗೇರ, ಗ್ರ್ಯಾಂಡ್ ಮಾಸ್ಟರ್ ಪ್ರವೀಣ್ ತಿಪ್ಸೆ, ಕರ್ನಾಟಕ ಬಾರ್ ಕೌನ್ಸಿಲ್ನ ಉಪಾಧ್ಯಕ್ಷ ರವೀಂದ್ರನಾಥ ರೈ, ಹಿರಿಯ ನ್ಯಾಯವಾದಿ ನೇಮಿರಾಜ ಶೆಟ್ಟಿ, ಎಪಿಪಿ ಕಿರಣ್, ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಬಿ.ಕೆ.ಧನಂಜಯ ರಾವ್, ವಕೀಲರ ಸಂಘದ ಕಾರ್ಯದರ್ಶಿ ಅಕ್ಷಯ ಟಿ. ರಾವ್ ಇದ್ದರು.
ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್ ಸ್ವಾಗತಿಸಿದರು. ಮನೋರಮಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಡಾ.ಹೆಗ್ಗಡೆ ಹೇಳಿದ ಮಾತು.
ಆತ್ಮವಿಶ್ವಾಸ ಬೆಳೆಸುವ ಈ ಆಟವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಶಾಂತಿವನ ಟ್ರಸ್ಟ್ ವತಿಯಿಂದ ಎಲ್ಲಾ ಶಾಲೆಗಳಿಗೆ ಚೆಸ್ ಆಟದ ತಿಳಿ ಹೇಳಲಾಗುವುದು.-ಡಾ. ಹೆಗ್ಗಡೆ
