ಬಂಟ್ವಾಳ: ಇಲ್ಲಿನ ರಥಬೀದಿಯನ್ನು ಕರೋನಾ ಕಂಟೈನ್ಮೆಂಟ್ ಪ್ರದೇಶವಾಗಿ ಸೀಲ್ ಡೌನ್ ಘೋಷಣೆ ಮಾಡಿದ್ದು, ಈ ಪ್ರದೇಶದಲ್ಲಿ ಕಾರ್ಯಾಚರಿಸುವ ನಾಲ್ಕು ನ್ಯಾಯಬೆಲೆ ಅಂಗಡಿಗಳ ಪಡಿತರದಾರರಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ರಥಬೀದಿಯಲ್ಲಿರುವಲಕ್ಷ್ಮೀನಾರಾಯಣ ಕಿಣಿ ಮತ್ತು ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯನ್ನು ಬಿ.ಸಿ.ರೋಡಿಗೆ ಸಮೀಪದ ಗಾಣದಪಡ್ಪುವಿನಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ.
ಹಾಗೆಯೇ ಸುಮಿತ್ರ ಕಿಣಿ ಮತ್ತು ರವೀಂದ್ರ ಪ್ರಭು ಇವರ ಪಡಿತರದಾರರಿಗೆ ಅಮ್ಟಾಡಿ ಗ್ರಾಮದ ಲೊರೆಟ್ಟೊ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಗೆ ಪರ್ಯಾಯ ಸ್ಥಳವನ್ನಾಗಿ ಗುರುತಿಸಲಾಗಿದೆ. ನಾಲ್ಕು ನ್ಯಾಯಬೆಲೆ ಅಂಗಡಿಗಳು ಕ್ವಾರಂಟೈನ್ ಸೀಲ್ ಡೌನ್ ಪ್ರದೇಶಕ್ಕೆ ಬರುವ ಕಾರಣ ಈ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಬುಧವಾರ ಬಂಟ್ವಾಳ ತಹಸೀಲ್ದಾರ್ ಪ್ರಕಟಣೆ ತಿಳಿಸಿದೆ. 
ಮಾಜಿ ಸಚಿವರ ಭೇಟಿ:
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ಬಂಟ್ವಾಳ ಪೇಟೆಗೆ ಭೇಟಿ ನೀಡಿ ಲಾಕ್ ಡೌನ್ ಪ್ರದೇಶವನ್ನು ಅವಲೋಕಿಸಿದರು.ಈ ಪರಿಸರದ ತ್ಯಾಗರಾಜ ರಸ್ತೆ,ವಿ.ಪಿ.ರಸ್ತೆ,ಮಾರ್ಕೆಟ್ ರಸ್ತೆಯಲ್ಲಿರುವ ಮನೆಮಂದಿಯನ್ನು ಹಾಗೂ ತೆರೆದಿದ್ದ ಕೆಲ ದಿನಸಿ,ತರಕಾರಿ ಅಂಗಡಿ ಮಾಲಕರೊಂದಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.ಸದಾ ಜಿಲ್ಲಾಡಳಿತ,ತಾಲೂಕಾಡಳಿತದೊಂದಿಗೆ ಸಂಪರ್ಕದಲ್ಲಿದ್ದು,ಸಂಕಷ್ಟದಲ್ಲಿರುವ ಜನರಿಗೆ ಸಹಕಾರ ನೀಡಲು ಬದ್ದನಾಗಿದ್ದೆನೆ.ಯಾರು ಕೂಡ ಆತಂಕಪಡಬೇಕಾಗಿಲ್ಲ ಎಂದು ಧೈರ್ಯ ತುಂಬಿದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ , ಪ್ರವೀಣ ಕಿಣಿ ಉಪಸ್ಥಿತರಿದ್ದರು.
ನೀರು ಪೂರೈಕೆ ಸ್ಥಗಿತ:
ಬಂಟ್ವಾಳ ಕಸ್ಬಾ ಗ್ರಾಮದ ಬೈಪಾಸ್ ರಸ್ತೆ,ಕಾಲೇಜ್ ರಸ್ತೆ ,ಲೆಕ್ಕೆಸರಿಪಾದೆ ಮೊದಲಾದಭಾಗಗಳಿಗೆ ಕಳೆದ ಮೂರುದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಬಿ.ಸಿ.ರೋಡ್- ಪುಂಜಾಕಟ್ಟೆ ವರೆಗೆ ರಸ್ತೆ ಕಾಮಗಾರಿಯ ವೇಳೆ ಪೈಪ್ ಲೈನ್ ಕಡಿತಗೊಂಡಿದರಿಂದ ನೀರಿಲ್ಲದೆ ಈ ಭಾಗದ ಜನರು ಪರದಾಡುವಂತಾಯಿತು.ಬುಧವಾರ ಬೆಳಿಗ್ಗೆ ಮಾಹಿತಿ ಪಡೆದ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ತಕ್ಷಣ ದುರಸ್ತಿಗೆ ಕ್ರಮ ಕೈಗೊಂಡಿದ್ದು, ಸಂಜೆಯ ವೇಳೆಗೆ ನೀರು ಪೂರೈಕೆಯಾಗಿದೆ ಎಂದು ತಿಳಿದು ಬಂದಿದೆ.
