ಕೋಲಾರ: ಜಿಲ್ಲೆಯನ್ನು ಕರೋನಾ ಮುಕ್ತವಾಗಿಸಲು ತಮ್ಮ ಕುಟುಂಬಗಳಿಂದ ದೂರವಿದ್ದು, ಶಿಸ್ತುಬದ್ದವಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಪೊಲೀಸರು ನಿಜವಾದ ಕರೋನಾ ಸೈನಿಕರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಶ್ಲಾಘಿಸಿದರು.
ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಪೊಲೀಸ್ ಸಿಬ್ಬಂದಿಗೆ ಪತ್ರಕರ್ತರ ಸಂಘ ಹಾಗೂ ಎಪಿಎಂಸಿ ಅಧ್ಯಕ್ಷ ಡಿಎಲ್ ನಾಗರಾಜ್ ಕೊಡುಗೆಯಾಗಿ ನೀಡಿರುವ ಅಕ್ಕಿ ಮತ್ತು ತರಕಾರಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಉರಿ ಬಿಸಿಲಿನಲ್ಲಿ ನಮ್ಮ ಪೊಲೀಸ್ ಸಿಬ್ಬಂದಿ ತಮ್ಮ ಕುಟುಂಬಗಳನ್ನು ಬಿಟ್ಟು ಲಾಕ್ ಡೌನ್ಅನ್ನು ಅನುಷ್ಟಾನಗೊಳಿಸಿದ್ದಾರೆ, ಅವರೊಂದಿಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ,ಪತ್ರಕರ್ತರು ಕರೋನಾ ಸೈನಿಕರಾಗಿ ದುಡಿದಿದ್ದರಿಂದಲೇ ಇಂದು ಕೋಲಾರ ಜಿಲ್ಲೆ ಹಸಿರುವಲಯವಾಗಿದೆ ಎಂದು ತಿಳಿಸಿದರು.
ಪೊಲೀಸರು ಇದೇ ಮೊದಲ ಬಾರಿಗೆ ಇಷ್ಟು ಅಚ್ಚು ಕಟ್ಟಾಗಿ ಬಂದೋಬಸ್ತ್ ಕಾರ್ಯ ನಿರ್ವಹಿಸಿದ್ದು, ಪತ್ರಕರ್ತರು, ವೈದ್ಯರು, ಪೊಲೀಸರು, ನೌಕರರು ಈ ನಾಲ್ಕು ಆಧಾರ ಸ್ಥಂಭಗಳಿಂದಾಗಿ ನಾವು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ನಮ್ಮ ಸಿಬ್ಬಂದಿ 36 ಡಿಗ್ರಿ ಬಿಸಿಲಲ್ಲಿ ಮನೆ ಮಠ ಬಿಟ್ಟು ಕರ್ತವ್ಯ ನಿರ್ವಹಿಸುವುದು ನೋಡಿದರೆ ನಮಗೆ ತುಂಬಾ ನೋವಾಗುತ್ತದೆ ಅವರಿಗೂ ಜೀವನ, ಕುಟುಂಬ ಇದೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಎಂದು ಮನವಿ ಮಾಡಿದರು.
ಎಪಿಎಂಸಿ ಅಧ್ಯಕ್ಷ ಡಿ.ಎಲ್ ನಾಗರಾಜ್, ಪೊಲೀಸರ ಪರಿಶ್ರಮಕ್ಕೆ ಬೆಲೆಕಟ್ಟಲಾಗದು, ಕೆಲವು ಕಡೆಗಳಲ್ಲಿ ಅವರ ಮೇಲೆಯೇ ದೌರ್ಜನ್ಯ ನಡೆದ ಘಟನೆಗಳು ವರದಿಯಾಗಿದ್ದು ವಿಷಾದಕರ ಸಂಗತಿ ಎಂದ ಅವರು, ಇಂತಹ ದೌರ್ಜನ್ಯ ಮಟ್ಟಹಾಕಲು ಮತ್ತಷ್ಟು ಕಠಿಣ ಕಾನೂನುಗಳು ಅಗತ್ಯ ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು, ರೈತರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಪ್ರತಿ ಹಂತದಲ್ಲೂ ಅನ್ನದಾತನ ಪರ ನಿಂತ ಪೊಲೀಸರಿಗೆ ಧನ್ಯವಾದ ಎಂದರು.
ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಅವರು ಮಾತನಾಡಿ ಪೊಲೀಸರು ಕರೋನೊ ಲಾಕ್ ಡೌನ್ ಯಶಸ್ವಿಯಾಗಿ ಇಲ್ಲಿಯವರೆಗು ನಿರ್ವಹಿಸಿದ್ದರಿಂದಲೇ ಜಿಲ್ಲೆ ಕರೋನಾ ಮುಕ್ತವಾಗಿದೆ ಎಂದರು.
ಪ್ರತಿಯೊಂದು ಹಂತದಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ, ಜಿಲ್ಲೆ ಎರಡು ರಾಜ್ಯಗಳು, ಎರಡು ಜಿಲ್ಲೆಗಳ ಗಡಿ ಹೊಂದಿದೆ, ಗಡಿಯಲ್ಲಿ ಹೊರಗಿನವರು ನುಸುಳದಂತೆ ಕಟ್ಟೆಚ್ಚರ ವಹಿಸಿದ್ದರಿಂದಲೇ ನಾವಿಂದು ಸಂತೋಷದಿಂದ ಇದ್ದೇವೆ.
ಜಿಲ್ಲೆ ಇದುವರೆವಿಗೂ ಕರೋನೋ ಪಾಸಿಟಿವ್ ಬಂದಿಲ್ಲ ಗ್ರೀನ್ ಜೋನ್ ನಲ್ಲಿಯೇ ಇದೆ ಇದು ನಮಗೆ ಹೆಮ್ಮೆ ಹೀಗಾಗಿ ಪೊಲೀಸರಿಗೆ ಪತ್ರಕರ್ತ ಸಂಘ ಹಾಗೂ ಎಪಿಎಂಸಿ ಅಧ್ಯಕ್ಷರಾದ ಡಿಎಲ್ ನಾಗರಾಜು ರವರ ಸಹಕಾರದಿಂದ ಅಕ್ಕಿ ಮತ್ತು ತರಕಾರಿ ವಿತರಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಹಿರಿಯಪತ್ರಕರ್ತ ಅನಂತರಾಮ್, ವೃತ್ತ ನಿರಿಕ್ಷಕ ರಂಗಸ್ವಾಮಯ್ಯ, ಉಪನಿರೀಕ್ಷಕರಾದ ಅಣ್ಣಯ್ಯ, ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್, ಪೊಲೀಸ್ ಸಿಬ್ಬಂದಿ, ಪತ್ರಕರ್ತರು ಹಾಜರಿದ್ದರು.
