ಬಂಟ್ವಾಳ: ಕೊರೋನ ಸೋಂಕಿಗೆ ಮೃತಪಟ್ಟ ಮಹಿಳೆಯ ಅತ್ತೆಯು ಗುರುವಾರ ಸಂಜೆ ಕೊರೋನ ಸೋಂಕಿನಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಬಂಟ್ವಾಳ ಪರಿಸರದ ನಾಗರಿಕರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಏ.7 ರಂದು ಸೊಸೆ ಅತ್ತೆಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸೊಸೆ ಏ.18 ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದು,ಮರುದಿನ ಗಂಟಲುದ್ರವದ ವರದಿ ಬರುವ ಮೊದಲೇ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು.
ಸಂಜೆಯ ವೇಳೆ ಇವರ ವರದಿಯು ಪಾಸಿಟಿವ್ ಬಂದಿತ್ತು.ಇದಾದ ಬಳಿಕ ಇವರ ನೆರೆಮನೆಯ ನಿವಾಸಿ,ಸಂಬಂಧಿಯಾದ 67 ರ ಮಹಿಳೆಯಲ್ಲು ಕೊರೋನ ಸೋಂಕು ದೃಢಪಟ್ಟಿದ್ದು,ಸದ್ಯ ಇವರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಾಗೆಯೇ ಮೃತ ಮಹಿಳೆಯ ಅತ್ತೆಗೂ ಬೆಳಿಗ್ಗೆ ಪಾಸಿಟಿವ್ ಕಂಡುಬಂದಿದ್ದು ಸಂಜೆಯವೇಳೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರಿಂದ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಬೆಳಗ್ಗಿನ ಹೊತ್ತು ಕೆಲ ತರಕಾರಿ,ದಿನಸಿ ಅಂಗಡಿ ತೆರೆದಿತ್ತಾದರೂ, ನಗರವಾಸಿಗಳು ಒಂದಷ್ಟು ಸಾಮಾಗ್ರಿ ಖರೀದಿಸಿದರು.11 ಗಂಟೆಯ ಹೊತ್ತಿಗೆ ಅಂಗಡಿಗಳು ಮುಚ್ಚಿತ್ತು. ಬಳಿಕ ಸಂಚಾರಕ್ಕೆ ಮುಕ್ತವಾಗಿದ್ದ ಮಾರ್ಕೆಟ್ ರಸ್ತೆಯಲ್ಲಿ ಜನ,ವಾಹನ ಸಂಚಾರವೇ ಕಾಣಿಸಲಿಲ್ಲ, ಆದರೆ ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ 12 ಗಂಟೆಯವರೆಗೆ ಎಲ್ಲ ತರಕಾರಿ,ದಿನಸಿ ಅಂಗಡಿ ತೆರೆದು ವ್ಯಾಪಾರ ನಡೆಸಿದರು.
ತರಕಾರಿ ಅಂಗಡಿ ಖಾಲಿ:
ಮುಂದಿನ ಒಂದು ತಿಂಗಳ ಕಾಲ ರಂಜಾನ್ ಉಪವಾಸ ಆರಂಭವಾದ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ವ್ಯಾಪಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಿ ಮಾರ್ಕೆಟ್ ರಸ್ತೆಯಲ್ಲಿರುವ ಒಂದೆರಡು ತರಕಾರಿ ಅಂಗಡಿಯವರು ತಮ್ಮ ಅಂಗಡಿಯಲ್ಲಿದ್ದ ಎಲ್ಲ ತರಕಾರಿಯನ್ನು ಖಾಲಿ ಮಾಡಿದ್ದಾರೆ. ಸೀಲ್ ಡೌನ್ ಪ್ರದೇಶದಲ್ಲಿ ಬಂದೋಬಸ್ತ್ ನ್ನು ಮತ್ತಷ್ಟು ಬಿಗುಗೊಳಿಸಲಾಗಿದ್ದು,ಶ್ರೀ ವೆಂಕಟರಮಣ ದೇವಸ್ಥಾನದ ಕಲ್ಯಾಣ ಮಂಟಪದ ರಸ್ತೆ,ಮಠದ ಓಣಿ,ಶಾಲಾ ರಸ್ತೆ ವೈದ್ಯನಾಥ ರಸ್ತೆಗೆ ಬುಧವಾರ ರಾತ್ರಿ ಬ್ಯಾರೀಕ್ಯಾಡ್ ಹಾಕಿ ಬಂದ್ ಮಾಡಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಮೂಲಕ ಮಾರ್ಕೆಟ್ ರಸ್ತೆಗೆ ಬರಲು ಯತ್ನಿಸಿದ ಯುವಕರಿಗೆ ಸ್ಥಳದಲ್ಲಿದ್ದ ಪೋಲಿಸರು ಲಾಠಿ ಬೀಸಿ ಕಳುಹಿಸಿದ ಪ್ರಸಂಗವು ನಡೆದಿದೆ. ಕಂಟೈನ್ಮಂಟ್ ವಲಯದ ಮನೆಮಂದಿಗೆ ಪುರಸಭೆಯಿಂದ ಹಾಲು ಪೂರೈಕೆ ಯಾಗಿದ್ದು, ಹಿ.ಯು.ಸೇ.ಪ್ರಮುಖ ಶಿವಪ್ರಸಾದ್ ಅವರು ಸ್ಥಳೀಯ ಔಷಧಿ ಅಂಗಡಿಯಿಂದ ಔಷಧಿ ಖರೀದಿಸಿ ಕೆಲ ಮನೆಗಳಿಗೆ ಪೂರೈಸಿದ್ದಾರೆ.
ವಿಶೇಷ ತಂಡದಿಂದ ಮಾದರಿ ಸಂಗ್ರಹ :
ಎನ್ಐಟಿಕೆಯಲ್ಲಿ ಕ್ವಾರಂಟೈನ್ ನಲ್ಲಿರುವವರ ದ್ವಿತೀಯಸಂಪರ್ಕ ಹೊಂದಿರುವವರ ಮಾದರಿ ಸಂಗ್ರಹ ಕಾರ್ಯ ಗುರುವಾರ ಆರೋಗ್ಯ ಇಲಾಖೆಯ ವಿಶೇಷ ತಂಡದಿಂದ ಕಾರ್ಯ ನಡೆಯಿತು. ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆ ಮತ್ತು ಇಬ್ಬರಲ್ಲಿ ಫಾಸಿಟಿವ್ ಕಾಣಿಸಿಕೊಂಡ ಮನೆ ಕಂಪೌಂಡಿನ ಪಕ್ಕದ ಕಂಪೌಂಡಿನಲ್ಲಿ ವಾಸ್ತವ್ಯವಿರುವ ಮನೆಮಂದಿಯ ಹಾಗೂ ಕ್ವಾರಂಟೇನ್ ನಲ್ಲಿರುವ ವೈದ್ಯರ ಪತ್ನಿಯ ಸಹಿತ ಕೆಲವರ ಮಾದರಿಯನ್ನು ಪರೀಕ್ಷೆಗಾಗಿ ಈ ವಿಶೇಷ ತಂಡ ಸಂಗ್ರಹಿಸಿತು. ಈ ನಡುವೆ ಪುರಸಭಾ ವ್ಯಾಪ್ತಿಯಲ್ಲಿ ಶುಚಿತ್ವ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರನ್ನು ಕೂಡ ಪರಿಸರಾಧಿಕಾರಿ ಯಾಸ್ಮೀನ್ ಅವರು ಆರೋಗ್ಯ ತಪಾಸಣೆ ನಡೆಸಿದರು.
ವಾಹನ ವಶ:
ಬೆಳಿಗ್ಗಿನಿಂದಲೇ ಕಾರ್ಯಾ ಚರಣೆ ಆರಂಭಿಸಿದ ಬಂಟ್ವಾಳ ಟ್ರಾಫಿಕ್ ಪೋಲಿಸರು ನಿಯಮ ಉಲ್ಲಂಘಿಸಿ,ಅನಗತ್ಯವಾಗಿ ತಿರುಗಾಡುತ್ತಿದ್ದ ದ್ವಿಚಕ್ರ,ಕಾರುಗಳನ್ನು ವಶಪಡಿಸಿದ್ದಾರೆ.
