ಬಂಟ್ವಾಳ: ಕೊರೊನಾ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಗೃಹಿಣಿಯ ಮನೆ ಪಕ್ಕದ ನಿವಾಸಿ,ಹತ್ತಿರದ ಸಂಬಂಧಿ ಮಹಿಳೆಗೆ ಮಂಗಳವಾರ ಕೊರೋನ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜನರಲ್ಲಿ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮೃತ ಪಟ್ಟ ಗೃಹಿಣಿಯ ಸಂಬಂಧಿ ಮಹಿಳೆಗೆ ಕೊರೋನ ಸೋಂಕು ದೃಢಪಟ್ಟ ಸುದ್ದಿ ಬಂದ ಬೆನ್ನಲ್ಲೆ ಬಂಟ್ವಾಳ ನಗರ ಪರಿಸರವನ್ನು ಮುಂಜಾಗ್ರತಾ ಕ್ರಮವಾಗಿ ಕೈಗೊಂಡಿರುವ ಸೀಲ್ ಡೌನ್ ನನ್ನು ಮತ್ತಷ್ಟು ಬಿಗುಗೊಳಿಸಲಾಗಿದೆ.

ಈಗಾಗಲೇ ಸೀಲ್ ಡೌನ್ ಮಾಡಲಾದ 100 ಮೀ.ವ್ಯಾಪ್ತಿಯನ್ನು ‘ಕಂಟೈನ್ಮೆಂಟ್ ವಲಯ’ ಎಂದು ಗುರುತಿಸಲಾಗಿದೆ. ಇಲ್ಲಿನ ಮೇಲುಸ್ತುವಾರಿ ವಹಿಸಿರುವ ತಹಶೀಲ್ದಾರ್ ಮಂಗಳವಾರ ಪುರಸಭಾ ಕಚೇರಿಯಲ್ಲಿ ಸಭೆ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ ಸೀಲ್ ಡೌನ್ ವ್ಯಾಪ್ತಿಯಲ್ಲಿರುವ ಜನರಿಗೆ ಅಗತ್ಯ ವಸ್ತು ಪೂರೈಸುವ ನಿಟ್ಟಿನಲ್ಲಿ ಪುರಸಭೆಯಲ್ಲಿ ಕಂಟ್ರೋಲ್ ರೂಂ ತೆರೆಯುವುದು, ನಿರ್ಬಂಧಿತ ಮನೆ,ಮನೆಗೆ ತೆರಳಿ ಮಾಹಿತಿ ನೀಡಲು ನಿರ್ಧರಿಸಲಾಗಿದೆ.
ಪುರಸಭೆಯಲ್ಲಿ ಕಂಟ್ರೋಲ್ ರೂಂ: ಸೀಲ್ ಡೌನ್ ಒಳಗಾಗಿರುವ ವ್ಯಾಪ್ತಿಯ ಜನರು ಅಗತ್ಯ ವಸ್ತುಗಳು ಬೇಕಾದಲ್ಲಿ ಪುರಸಭೆಯಲ್ಲಿ ತೆರೆಯಲಾದ ಕಂಟ್ರೋಲ್ ರೂಂ ನಂಬರ್ 08255-233130 ನ್ನು ಸಂಪರ್ಕಿ ಸಬಹುದು ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ತಿಳಿಸಿದ್ದಾರೆ. ರಥಬೀದಿ ಸ್ತಬ್ದ: ಬಂಟ್ವಾಳ ಪೇಟೆಯ ಪ್ರಮುಖ ರಸ್ತೆಯಾದ ರಥಬೀದಿ ಸಂಪೂರ್ಣ ಸೀಲ್ ಡೌನ್ ಗೆ ಒಳಪಟ್ಟಿದ್ದು,ಈ ರಸ್ತೆಯನ್ನು ಸಂಪರ್ಕಿಸುವ ಎಲ್ಲಾ ಒಳ ಮತ್ತು ಹೊರಹೋಗುವ ರಸ್ತೆಯನ್ನು ಮಣ್ಣುದಿಬ್ಬ,ಬ್ಯಾರಿಕೇಡ್ ಹಾಕಿ ದಿಗ್ಬಂಧನ ಮಾಡಿ ಪೋಲಿಸ್ ಬಂದೋಬಸ್ತ್ ಹಾಕಲಾಗಿದೆ.
