ಬಂಟ್ವಾಳ: ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟ್ವಾಳ ನಗರ ಸೋಮವಾರ ಸಂಪೂರ್ಣ ಸ್ತಬ್ದವಾಗಿದೆ.ಸರಕಾರದ ಮುಂದಿನ ಆದೇಶದವರೆಗೂ ಯಥಾಸ್ಥಿತಿ ಮುಂದುವರಿಯಲಿದೆ. ಮಳೆಗಾಲದಲ್ಲಿ ನೆರೆ ಬಂತೆಂದಂರೆ ಬಂಟ್ವಾಳವನ್ನು ನೆರೆ ನೀರು ಅವರಿಸಿ ದ್ವೀಪವಾಗಿ ಎಲ್ಲಾ ವ್ಯವಹಾರ ಬಂದ್ ಆಗಿರುವುದನ್ನು ಕಣ್ಣಾರೆ ಕಂಡವರಿದ್ದಾರೆ.ಆದರೆ ಕೊರೋನ ಎಂಬ ಮಹಾಮಾರಿಗೆ ತುತ್ತಾಗಿ ಬಂಟ್ವಾಳ ನಗರ ಭಾಗದ ಗೃಹಿಣಿಯೋರ್ವರು ಮೃತಪಟ್ಟ ಹಿನ್ನಲೆಯಲ್ಲಿ ಇಡೀ ಬಂಟ್ವಾಳ ನಗರ ಪ್ರದೇಶ ಸರಕಾರದ ನಿರ್ಧಾರದನ್ವಯ ಸಂಪೂರ್ಣ ಸೀಲ್ ಡೌನ್ ಗೊಳಗಾಗಿ ವ್ಯವಹಾರ ಸ್ಥಗಿತಗೊಂಡಿದ್ದಲ್ಲದೆ ಜನಸಾಮಾನ್ಯರು ಕೂಡ ಮನೆಯಿಂದ ಹೊರಭಾರದಂತ ಪರಿಸ್ಥಿತಿ ಇದೇ ಮೊದಲಬಾರಿಗೆ ನಿರ್ಮಾಣವಾಗಿರುವುದು ಇತಿಹಾಸ ಪುಟದಲ್ಲಿ ದಾಖಲಾಗಿದೆ.
ಮುಂದುವರಿದ ಆತಂಕ: ಗೃಹಿಣಿ ಮೃತಪಟ್ಟ ಸುದ್ದಿ ಹರಡಿದ ಕೆಲಹೊತ್ತಿನಲ್ಲಿಯೇ ಪೋಲಿಸರು ಬಂಟ್ವಾಳದಲ್ಲಿ ದಿಡೀರ್ ಸೀಲ್ ಡೌನ್ ಘೋಷಿಸಿದ್ದರು.ಆ ಸಂದರ್ಭದಲ್ಲಿ ನಗರ ಪ್ರದೇಶದ ಜನರಲ್ಲಿ ಮನೆಮಾಡಿರುವ ಆತಂಕ ಇನ್ನು ದೂರವಾಗಿಲ್ಲ,ಈ ನಡುವೆ ಮಹಿಳೆಯ ಸಾವಿನ ಬಗ್ಗೆ ಸ್ಥಳೀಯವಾಗಿ ಉಹಾಪೋಹಗಳು ಹರಡಿರುವುದರಿಂದ ಜನರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.
ಭಾನುವಾರ ಮಧ್ಯರಾತ್ರಿಯ ವೇಳೆಗೆ ಪೋಲಿಸರ ಸಹಕಾರದಲ್ಲಿ ಪುರಸಭೆಯ ಪರಿಸರವಿಭಾಗದ ಸಹಾಯಕ ಇಕ್ಬಾಲ್ ಅವರ ನೇತೃತ್ವದಲ್ಲಿ ನಗರದ ಒಳರಸ್ತೆಯನ್ನು ಸಂಪರ್ಕಿಸುವ ಮತ್ತು ಹೊರಹೋಗುವ ರಸ್ತೆಗೆ ಮಣ್ಣಿನ ರಾಶಿಹಾಕಿ ಸಂಚಾರಕ್ಕೆ ತಡೆಒಡ್ಡಲಾಗಿದೆ.ಪೇಟೆಯ ಐದು ಕಡೆಯಲ್ಲಿ ಮಣ್ಣಿನ ಗುಡ್ಡ ಹಾಕಲಾಗಿದ್ದರೆ,ಒಂದೆರಡು ಕಡೆಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಬಂದ್ ಮಾಡಲಾಗಿದೆ.ಸೀಲ್ ಡೌನ್ ಮಧ್ಯೆಯು ಬೆಳಗ್ಗಿನ ಮತ್ತು ಸಂಜೆಯ ಹೊತ್ತು ಕೆಲವರು ರಸ್ತೆಯಲ್ಲಿ ತಿರುಗಾಡುತ್ತಿದ್ದ ದೃಶ್ಯ ಕಂಡುಬಂತು.ಆಗಾಗ ಕರ್ತವ್ಯದಲ್ಲಿದ್ದ ಪೋಲಿಸ್ ಅಧಿಕಾರಿಗಳು ಗಸ್ತ್ ತಿರುಗತ್ತಿದ್ದರು.
ಸೀಲ್ ಡೌನ್ ವ್ಯಾಪ್ತಿಯೊಳಗೆ ಪುರಸಭಾ ಕಚೇರಿಯ ಇದ್ದು,ಅದು ಸೋಮವಾರ ತೆರೆದಿದ್ದು,ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಎಂದಿನಂತೆ ಕರ್ತವ್ಯದಲ್ಲಿ ನಿರತರಾಗಿದ್ದರು. ಬಾರದ ಹಾಲು: ಸೀಲ್ ಡೌನ್ ಹಿನ್ನಲೆಯಲ್ಲಿ ಪ್ರತಿನಿತ್ಯ ಮನೆಬಾಗಿಲಿಗೆ ಬರುತ್ತಿದ್ದ ಹಾಲು,ಪತ್ರಿಕೆಗಳು ಬಂಟ್ವಾಳದ ಯಾರ ಮನೆಗೂ ತಲುಪಿಲ್ಲ,ಹಾಲಿನ ವಾಹನವೇ ಬಾರದಿದ್ದು,ಜನರು ಪರದಾಡುವಂತಾಯಿತು.
ಪುರಸಭಾ ಸದಸ್ಯ ಗೋವಿಂದಪ್ರಭು ಅವರು ಈ ವಿಚಾರದಲ್ಲಿ ಬಂಟ್ವಾಳ ನಗರ ಠಾಣಾಧಿಕಾರಿಯವರಲ್ಲಿ ಬೆಳಿಗ್ಗೆಯೇ ಬಹಿರಂಗ ಅಸಮಾಧಾನ ತೋಡಿಕೊಂಡ ವಿದ್ಯಮಾನವು ನಡೆದಿದೆ.ಬಳಿಕ ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಅವರನ್ನು ಭೇಟಿಯಾದ ಪ್ರಭು ಅವರೊಂದಿಗೂ ಈ ಕುರಿತಾಗಿ ಚರ್ಚಿಸಿ ಮಂಗಳವಾರ ನಗರ ಪ್ರದೇಶದ ಜನರಿಗೆ ಹಾಲು ಪೂರೈಕೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ. ಮಂಗಳವಾರ ಹಾಲು ವಿತರಿಸಲು ಕ್ರಮಕೈಗೊಳ್ಳುವುದಾಗಿ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ. ಜಕ್ರಿಬೆಟ್ಟು ಮಣ್ಣು ತೆರವು: ಸೀಲ್ ಡೌನ್ ಹಿನ್ನಲೆಯಲ್ಲಿ ಜಕ್ರಿಬೆಟ್ಟು ಭಾಗದಲ್ಲಿ ಹಾಕಲಾದ ಮಣ್ಣನ್ನು ಸೋಮವಾರ ಸಂಜೆ ತೆರವುಗೊಳಿಸಲಾಗಿದೆ.ಮಾರ್ಕೆಟ್ ರಸ್ತೆಯನ್ನು ಮುಕ್ತಗೊಳಿಸುವುದು ರಥಬೀದಿರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು,ಈ ಭಾಗದ ಯಾರನ್ನು ಮನೆಯಿಂದ ಹೊರಬಾರದಂತೆ ಸೂಚಿಸಲಾಗಿದೆ.
ಆಶಾ ಕಾರ್ಯಕರ್ತೆಯರಿಂದ ಸರ್ವೇ :
ಸೋಮವಾರ ಮಧ್ಯಾಹ್ನದ ವೇಳೆಗೆ ಬಂಟ್ವಾಳ ನಗರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ತಂಡ ಮನೆ,ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ತಹಶೀಲ್ದಾರ್ ರಶ್ಮೀ ಮತ್ತವರ ಸಿಬ್ಬಂದಿಗಳು ಬೆಳಗ್ಗೆಯೇ ಸೀಲ್ ಡೌನ್ ಹಿನ್ನಲೆಯಲ್ಲಿ ಮುಂಜಾಗ್ರತಾವಾಗಿ ಕೈಗೊಂಡ ಕ್ರಮ ಕೊರೋನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಮನೆಯ ಸುತ್ತಮುತ್ತ ಸ್ಮಶಾನಮೌನ ಅವರಿಸಿದೆ.


