ಕೈಕಂಬ: ಲಾಕ್‍ಡೌನ್‍ನಿಂದ ಗ್ರಾಮೀಣ ಪ್ರದೇಶಗಳ ಬಹುತೇಕ ವೈದ್ಯರ ಕ್ಲಿನಿಕ್‍ಗಳು ಬಂದ್ ಆಗಿವೆ. ಹಾಗಾಗಿ ಸಾಮಾನ್ಯ ಕಾಯಿಲೆಗಳಿಗೂ ವೈದ್ಯಕೀಯ ಸೇವೆ ಸ್ಥಗಿತಗೊಂಡಿದ್ದು, ಗ್ರಾಮೀಣರು ತೊಂದರೆಗೆ ಸಿಲುಕಿದ್ದಾರೆ. ಗ್ರಾಮೀಣರು ಅನುಭವಿಸುತ್ತಿರುವ ಈವೊಂದು ಜಟಿಲ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ಅಥವಾ ಜನಪ್ರತಿನಿಧಿಗಳಿಂದ ಸಕಾರಾತ್ಮಕ ಮಾರ್ಗಸೂಚಿಗಳು ಇನ್ನೂ ಲಭಿಸಿಲ್ಲ. ಈ ನಡುವೆ ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ನಿವಾಸಿಗರಿಗೆ ಸ್ಥಳೀಯ ವೈದ್ಯ ದಂಪತಿಯಾದ ಡಾ. ಸಬಿನಾ ಮತ್ತು ಡಾ. ಮೊಹಮ್ಮದ್ ಸಾಲಿ ಆಶಾಕಿರಣವಾಗಿದ್ದಾರೆ.
ಅಡ್ಡೂರಿನ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯು ತಮ್ಮ ಮಸೀದಿಯ ಒಂದು ಕೊಠಡಿಯಲ್ಲಿ ಸ್ಥಳೀಯರ ಸಾಮಾನ್ಯ ರೋಗ-ರುಜಿನಕ್ಕೆ ಅನುಕೂಲವಾಗುವಂತೆ ಮಾ. 13ರಂದು ಉಚಿತ ವೈದ್ಯಕೀಯ ಸೇವೆ ಆರಂಭಿಸಿದ್ದಾರೆ. ಇಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಡಾ. ಸಬೀನಾ ಲಭ್ಯವಿದ್ದು, ಎಲ್ಲ ವರ್ಗದವರಿಗೆ ವೈದ್ಯಕೀಯ ತಪಾಸಣೆಯೊಂದಿಗೆ ಉಚಿತ ಔಷಧಿ ನೀಡುತ್ತಿದ್ದಾರೆ. ಇಲ್ಲಿಗೆ ಕಂಕನಾಡಿಯ `ಐ ಡೆಕೋರ್’ನ ಸಾಹಿಕ್ ಬಶೀರ್ ಅಡ್ಡೂರು ಔಷಧಿ ಪ್ರಾಯೋಜಕರಾಗಿದ್ದಾರೆ.
ಉಚಿತ ಸೇವೆ ಆರಂಭವಾದ ಎರಡನೇ ದಿನಕ್ಕೆ ಡಾ. ಸಬೀನಾ ಕ್ಲಿನಿಕ್‍ನಲ್ಲಿ ರೋಗಿಗಳು ಅಂತರ ಕಾಯ್ದುಕೊಂಡು 20ಕ್ಕೂ ಹೆಚ್ಚು ಮಂದಿ(ಮುಸ್ಲಿಮರು, ಹಿಂದೂಗಳು…) ಔಷಧಿಗಾಗಿ ಸರದಿಯಲ್ಲಿ ನಿಂತಿರುವುದು ಕಂಡು ಬಂತು. ಕೆಲವರು ಬಿಪಿ, ಶುಗರ್, ಹಲ್ಲು ನೋವು, ಗಾಯಗಳು ಮತ್ತು ಇತರ ನೋವುಗಳಿಗೆ ಉಚಿತವಾಗಿ ಔಷಧಿ ಪಡೆದುಕೊಂಡು ಧನ್ಯತಾ ಭಾವದಿಂದ ಹೊರ ನಡೆಯುತ್ತಿದ್ದರು. “ಇವರು ನಮ್ಮ ಪಾಲಿಗೆ ದೇವರಂತೆ ಬಂದಿದ್ದಾರೆ” ಎಂದು ಅಬೂಬಕ್ಕರ್ ಹೇಳಿದರು.
ವೈದ್ಯ ದಂಪತಿ ಹಿನ್ನೆಲೆ :
ಮಂಗಳೂರಿನ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಬಿಎ, ಎಂಎಸ್ ವ್ಯಾಸಂಗ ಮಾಡಿರುವ ಡಾ. ಸಬೀನಾ ಕಂಕನಾಡಿಯ ಎಂಐಎನ್‍ಎಸ್‍ಎಯಲ್ಲಿ ಆರು ವರ್ಷ ಹಾಗೂ ಯೇನಪೋಯ ಆಸ್ಪತ್ರೆಯಲ್ಲಿ ಆರು ತಿಂಗಳು ವೈದ್ಯಕೀಯ ಸೇವೆ ಸಲ್ಲಿಸಿದ್ದಾರೆ. ಆರು ವರ್ಷದ ಹಿಂದೆ ಫರಂಗಿಪೇಟೆಯ ಡಾ. ಮೊಹಮ್ಮದ್ ಸಾಲಿಯೊಂದಿಗೆ(ಬಿಪಿಟಿ, ಎಂಡಿ) ವಿವಾಹವಾದ ಇವರು ದುಬೈಗೆ ತೆರಳಿದ್ದರು. ಡಾ. ಸಾಲಿ ದುಬೈಯ ಗಲಿನಸ್ ರೀಹೆಬಿಲಿಟೇಶನ್ ಸೆಂಟರ್‍ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಕುಟುಂಬ ಸಹಿತ ಊರಿಗೆ ಆಗಮಿಸಿದ ವೈದ್ಯ ದಂಪತಿ ಸದ್ಯ ಲಾಕ್‍ಡೌನ್‍ನಿಂದ ಇಲ್ಲೇ ಉಳಿದುಕೊಂಡಿದ್ದಾರೆ. “ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸ್ವಇಚ್ಛೆಯಿಂದ ಜನಸೇವೆಗೈಯಲು ನಿಜಕ್ಕೂ ಸಂತೋಷವಾಗುತ್ತಿದೆ. ನಮ್ಮಲ್ಲಿಗೆ ದಿನಕ್ಕೆ 40ರಷ್ಟು ರೋಗಿಗಳು ಬರುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಅಂತರ ಕಾಯ್ದುಕೊಂಡು ಜೀವನ ನಡೆಸುವುದೇ ಕೋವಿಡ್ 19ನಿಂದ ಮುಕ್ತಿ ಹೊಂದಬಹುದಾದ ಏಕೈಕ ಮಾರ್ಗೋಪಾಯ” ಎಂದು ಡಾ. ಸಬೀನಾ ಹೇಳುತ್ತಾರೆ.
