ಬಂಟ್ವಾಳ : ಗ್ರಾಮಸ್ಥರ ಭಾರೀ ವಿರೋಧದ ನಡುವೆಯೂ ಸಜಿಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಡಂಪಿಂಗ್ ಯಾರ್ಡ್ ನಲ್ಲಿ ಬಂಟ್ವಾಳ ಪುರಸಭೆಯಿಂದ ಮಂಗಳವಾರ ಸಂಜೆ ಒಣತ್ಯಾಜ್ಯ ಹಾಕಲಾಗಿದ್ದು, ಈ ವೇಳೆ ವಿರೋಧ ವ್ಯಕ್ತಪಡಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ನಾಸೀರ್ ಸಹಿತ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕಂಚಿನಡ್ಕ ಪದವು ಡಂಪಿಂಗ್ ಯಾರ್ಡ್ ನಲ್ಲಿ ಪುರಸಭೆ ಹಲವು ಬಾರಿ ತ್ಯಾಜ್ಯ ವಿಲೇವಾರಿಗೆ ಪ್ರಯತ್ನಿಸಿತ್ತಾದರೂ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯರ ವಿರೋಧದಿಂದ ಅದು ವಿಫಲವಾಗಿತ್ತು.
ಆದರೆ ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅವರು ಮಾ.16ರಿಂದಲೇ ಡಂಪಿಂಗ್ ಯಾರ್ಡ್ ನಲ್ಲಿ ತ್ಯಾಜ್ಯ ಸಂಸ್ಕರಣೆ ಮಾಡುವಂತೆ ಪುರಸಭಾ ಅಧಿಕಾರಿಗಳಿಗೆ ಆದೇಶ ನೀಡಿದ್ದರು.ಆದರೆ ಇದನ್ನು ವಿರೋಧಿಸಿದ್ದ ಸಜಿಪನಡು ಗ್ರಾಮಸ್ಥರು ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಇರುವ ಮನೆಗಳನ್ನು, ಶಾಲೆ, ಅಂಗನವಾಡಿಯನ್ನು ತೆರವುಗೊಳಿಸಿ ಬೇರೆಡೆ ಪುನರ್ ವಸತಿ ಕಲ್ಪಿಸಬೇಕು, ಈಗಾಗಲೇ ಪುರಸಭೆಯ ಮುಂದೆ ಇರಿಸಿದ್ದ 21 ಬೇಡಿಕೆಗಳನ್ನು ಈಡೇರಿಸಿದ ಬಳಿಕವೇ ತ್ಯಾಜ್ಯ ಸಂಸ್ಕರಣೆ ಮಾಡಬೇಕು ಎಂದು ಒತ್ತಾಯಿಸಿತ್ತತಲ್ಲದೆ ಒಂದು ವೇಳೆ ಕಸದ ಲಾರಿ ಬಂದರೆ ತಡೆಯುವುದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭೆ ನೂರಕ್ಕೂ ಅಧಿಕ ಪೊಲೀಸ್ ಬಂದೋಬಸ್ತ್ ನಲ್ಲಿ ತ್ಯಾಜ್ಯವನ್ನು ಡಂಪ್ ಮಾಡಿದೆ.ಸಂಸ್ಕರಣ ಘಟಕದ ಗೇಟ್ ಮುಂಭಾಗದಲ್ಲಿ ಮಹಿಳೆಯರು, ಮಕ್ಕಳೆನ್ನದೆ ಸುಮಾರು 100 ಕ್ಕೂ ಅಧಿಕ ಮಂದಿ ನೆರೆದಿದ್ದು, ಪುರಸಭೆಯ ಕ್ರಮವನ್ನು ಖಂಡಿಸಿದರು. ಆರಂಭದಲ್ಲಿ ಪ್ರತಿಭಟನಾಕಾರರ ಮನವೊಲಿಕೆಗೆ ಬಂದ ಪುರಸಭಾ ಪರಿಸರ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ, ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಡಿವೈಎಸ್ಪಿ ವೆಲೈಂಟಿನ್ ಡಿಸೋಜ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಅವರು ಜಗ್ಗಲಿಲ್ಲ. ಕೊನೆಗೆ ತ್ಯಾಜ್ಯದ ಲಾರಿಯನ್ನು ತಡೆಯಲು ಗೇಟ್ ಬಳಿ ನೆರೆದಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ವೇಳೆ ಸಜಿಪನಡು ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ನಾಸೀರ್ ಸಹಿತ 30 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿದರು.
