ಕೈಕಂಬ: ಮಂಗಳೂರು ತಾಲೂಕಿನ ಮುತ್ತೂರು ಗ್ರಾಮಪಂಚಾಯತ್ ನ, 28 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಸುಸಜ್ಜಿತ ನೂತನ ಕಚೇರಿ ಕಟ್ಟಡವನ್ನು ಮಂಗಳೂರು ಉತ್ತರ ಶಾಸಕ ಡಾ|ಭರತ್ ಶೆಟ್ಟಿಯವರು ಶನಿವಾರ ಉದ್ಘಾಟಿಸಿದರು. ನಂತರ ನಡೆದ ಸರಳ ಸಮಾರಂಭವನ್ನು ಜ್ಯೋತಿ ಬೆಳಗಿಸಿ, ಭತ್ತ ತುಂಬಿದ ಕಲಸಿಗೆಯಲ್ಲಿರಿಸಿದ್ದ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಮುತ್ತೂರು ಪಂಚಾಯತ್ ಗೆ ಸುಮಾರು 3 ಕೋಟಿ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ನೀಡಲಾಗಿದೆ, ಜನಪ್ರತಿನಿಧಿಗಳು ಜಾತಿ, ಮತ, ಧರ್ಮ, ರಾಜಕೀಯವನ್ನು ಬದಿಗಿಟ್ಟು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು, ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂದು ರಾಜಕೀಯಕ್ಕೆ ಬರುತ್ತೇವೆ ಆದರೆ ಎಲ್ಲವನ್ನೂ ಮಾಡಲು ಆಗುವುದಿಲ್ಲ, ಇತಿಮಿತಿಯ ಒಳಗೆ ಸಾಧ್ಯವಾದಷ್ಟು ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ, ಜನಪ್ರತಿನಿಧಿಯಾದವರಿಗೆ ಅಭಿವೃದ್ಧಿಯೇ ಮುಖ್ಯವಾಗಿರಬೇಕು ಎಂದು ಪಂಚಾಯತ್ ಗೆ ಶುಭ ಹಾರೈಸಿ, ಸ್ವತಃ ವೈದ್ಯರೂ ಆಗಿರುವ ಶಾಸಕರು ಕೊರೊನಾ ವೈರಸ್ ಹರಡುವ ಬಗ್ಗೆ ಮತ್ತು ನಾವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಿ ಜಾಗರೂಕರಾಗಿರುವಂತೆ ಸಲಹೆ ನೀಡಿದರು.
ಜಿಲ್ಲಾಪಂಚಾಯತ್ ಸದಸ್ಯ ಜನಾರ್ಧನ ಗೌಡ ಮುಚ್ಚೂರು ಮಾತನಾಡಿ ಗ್ರಾಮ ಸ್ವರಾಜ್ ಕಾಯ್ದೆಯಿಂದಾಗಿ ಇಂದು ಗ್ರಾಮಪಂಚಾಯತ್ ಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿವೆ, ಹಳ್ಳಿಯ ವಿಧಾನಸಭೆಗಳು ಎಂದೇ ಕರೆಯಲ್ಪಡುವ ಗ್ರಾಮಪಂಚಾಯತ್ ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಮೂಲಕ ಕಟ್ಟಕಡೆಯ ಪಂಚಾಯತ್ ಕೂಡ ಅಭಿವೃದ್ಧಿ ಕಾಣಬೇಕು, ಗ್ರಾಮದ ಸಮಗ್ರ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿರುವ ಮುತ್ತೂರು ಪಂಚಾಯತ್ ನ್ನು ಅಭಿನಂಧಿಸುವುದಾಗಿ ಹೇಳಿದರು, ಶಾಸಕರನ್ನು ವೇದಿಕೆಯಲ್ಲಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಳೆದ 5 ವರ್ಷಗಳಿಂದ ಪಂಚಾಯತ್ ಕಚೇರಿಗೆ ಉದಾರವಾಗಿ ತನ್ನ ಕಟ್ಟಡದಲ್ಲಿ ಅವಕಾಶ ಕೊಟ್ಟ ಜೋಸೆಫ್ ಅಂತೋನಿ ಮೊರಾಸ್, ರಂಗ ನಿರ್ದೇಶಕ ಶಶಿಧರ್ ಅಡಪ, ನೂತನ ಕಟ್ಟಡ ಸ್ಥಾಪನೆಗಾಗಿ ಶ್ರಮಿಸಿದ್ದ ನಿವೃತ್ತ ಪಿಡಿಓ ಪುಷ್ಪಾ ಸಾಲಿಯಾನ್, ಪಂಚಾಯತ್ ಕಾರ್ಯದರ್ಶಿ ವಸಂತಿ, ಪಂಚಾಯತ್ ನ ಪ್ರಾರಂಭದಲ್ಲಿ ಪಿಡಿಓ ಆಗಿ ಕಾರ್ಯನಿರ್ವಹಿಸಿದ್ದ ಲೋಕನಾಥ್ ಭಂಡಾರಿ, ನೂತನ ಕಟ್ಟಡದ ಗುತ್ತಿಗೆದಾರ ರಂಜನ್ ಕುಮಾರ್ ಅರಳ ಅವರುಗಳನ್ನು ಶಾಸಕರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಅಲ್ಲದೆ ಪಂಚಾಯತ್ ಗೆ ವಿವಿಧ ರೀತಿಯಲ್ಲಿ ಸಹಕರಿಸಿದವರಿಗೆ, ಊರಿನ ಹಿರಿಯರಿಗೆ ಮತ್ತು ಗ್ರಾಮಪಂಚಾಯತ್ ಗೆ ಗಣನೀಯವಾಗಿ ಕೊಡುಗೆ ನೀಡಿದವರಿಗೆ ಸಮಾರಂಭದಲ್ಲಿ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ನಾಗೇಶ್ ಶೆಟ್ಟಿ ಮುತ್ತೂರು, ಕಾರ್ಯನಿರ್ವಹಣಾಧಿಕಾರಿ ಸದಾನಂದ, ಜಿ., ಸಣ್ಣ ನೀರಾವರಿ ಇಲಾಖೆಯ ತೃಪ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ಮಾಲಿನಿ, ಜಿಲ್ಲಾಪಂಚಾಯತ್ ಇಂಜಿನೀಯರುಗಳಾದ ರೋಹಿದಾಸ್, ವಿಶ್ವನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರವಿ, ಯಸ್., ಮಂಗಳೂರು ಪಾಲಿಕೆ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಪಂ. ಅಧ್ಯಕ್ಷೆ ನಾಗಮ್ಮ,ಉಪಾಧ್ಯಕ್ಷೆ ಪ್ರಭಾವತಿ, ಪಿಡಿಓ ರಾಜೀವಿ, ಕುಪ್ಪೆಪದವು ಪಂಚಾಯತ್ ಅಧ್ಯಕ್ಷೆ ಲೀಲಾವತಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂಚಾಯತ್ ಸದಸ್ಯರು, ಸಿಬಂದಿಗಳು, ಊರಿನ ಹಿರಿಯರು, ಮುಖಂಡರುಗಳು, ಗ್ರಾಮಸ್ಥರು ಹಾಜರಿದ್ದರು. ಪಂಚಾಯತ್ ಸದಸ್ಯ ಸತೀಶ್ ಬಳ್ಳಾಜೆ ಸ್ವಾಗತಿಸಿದರು. ಗಣೇಶ್ ಪಾಕಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
