ಮಂಗಳೂರು: ಗುರುವಾರ ಮುಂಜಾನೆ ಗೋಸಾಗಾಟ ನಡೆಯುತ್ತಿದ್ದ ಪಿಕ್ ಅಪ್ ವಾಹನವನ್ನು ಬೆನ್ನಟ್ಟಿಕೊಂಡು ಬಂದು ಕಲ್ಲಡ್ಕ ಸಮೀಪ ವಾಹನ ಪಲ್ಟಿಯಾಗುತ್ತಲೇ ಅದರಲ್ಲಿದ್ದ ಇಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ತಂಡದ ಐವರನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರಾದ ಅಜಿತ್, ಭವಿತ್, ವಿಜೇಶ್ ಕುಮಾರ್, ಮಿಥುನ್, ಗಣೇಶ್ ಎಂದು ಹೆಸರಿಸಲಾಗಿದೆ. ಶುಕ್ರವಾರ ಮುಂಜಾನೆ ಬಿ.ಸಿ.ರೋಡ್ ಕಡೆಯಿಂದ ಕುದ್ರೋಳಿಯ ಕಸಾಯಿಖಾನೆಗೆ ಗೋಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪಿಕ್ ಅಪ್ ವಾಹನವನ್ನು ಬೆನ್ನಟ್ಟಿದ್ದರು. ವಾಹನವನ್ನು ಬೈಕ್, ಕಾರುಗಳನ್ನು ಬೆನ್ನಟ್ಟುವುದನ್ನು ತಿಳಿದು ಚಾಲಕ ಗಲಿಬಿಲಿಗೊಂಡು ಅತೀವೇಗವಾಗಿ ಚಲಾಯಿಸಿದ್ದು, ವಾಹನ ಕಲ್ಲಡ್ಕ ಸಮೀಪದ ಪೂರ್ಲಿಪ್ಪಾಡಿ ಎಂಬಲ್ಲಿ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದಿತ್ತು.
ಈ ವೇಳೆ ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು 15ರಷ್ಟು ಮಂದಿಯಿದ್ದ ಯುವಕರು ವಾಹನದಲ್ಲಿ ಸಿಕ್ಕಿಹಾಕಿಕೊಂಡಿದ್ದ ಸಾಲೆತ್ತೂರು ಪಂಜರಕೋಡಿ ನಿವಾಸಿ ಅಬ್ದುಲ್ ಬಶೀರ್, ಕಟ್ಟೆ ನಿವಾಸಿ ಅಬೂಬಕರ್ ಸಿದ್ದೀಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆಗೆ ಸಂಬಂಧಿಸಿ ಮಿಥುನ್, ಗಣೇಶ್, ಚರಣ್, ನವೀನ್, ಧೀರಜ್ ಸೇರಿದಂತೆ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ನಗರ ಠಾಣಾ ಎಸ್ಐ ನಂದಕುಮಾರ್ ನೇತೃತ್ವದ ಪೊಲೀಸರು ಐವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇನ್ನುಳಿದವರ ಹುಡುಕಾಟ ನಡೆಯುತ್ತಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ


