ಬಂಟ್ವಾಳ: ಮನೆಯಂಗಳದಲ್ಲಿ ಶೇಖರಣೆಗೊಳ್ಳುವ ಕೊಳಚೆ ನೀರಿಗೆ ನಿರ್ವಹಣೆ ವ್ಯವಸ್ಥೆ ಕಲ್ಪಿಸಲು ನೀಡಲಾದ ದೂರಿಗೆ ಒಂದು ತಿಂಗಳಾದರೂ ಸ್ಪಂದಿಸದ ಸ್ಥಳೀಯ ಪಿಡಿಓ ವಿರುದ್ಧ ಸಾರ್ವತ್ರಿಕ ಆಕ್ರೋಶ ವ್ಯಕ್ತವಾಗಿದೆ. ಪುದು ಗ್ರಾಮದ ಕೋಡಿಮಜಲು ನಿವಾಸಿ ಝರೀನಾ ಎಂಬವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಲಿಖಿತ ದೂರು ನೀಡಿದ್ದು, ಇದುವರೆಗೂ ಸಂಬಂಧಿತ ಅಧಿಕಾರಿಗಳು ಕ್ರಮಕೈಗೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ ವೆಸಗಿದ ಅಧಿಕಾರಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಮನೆಯಂಗಳದಲ್ಲಿ ಕೊಳಚೆ ನೀರು ಶೇಖರಣೆಗೊಂಡು ಪರಿಸರ ಮಾಲಿನ್ಯವಾಗುತ್ತಿದ್ದರೂ, ತ್ಯಾಜ್ಯ ನೀರು ನಿರ್ವಹಣೆಗಾಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರ ಪರಿಣಾಮದಿಂದಾಗಿ ಕಳೆದೊಂದು ತಿಂಗಳಿನಿಂದ ಸ್ಥಳೀಯರು ತಮ್ಮ ಮನೆಯ ತ್ಯಾಜ್ಯ ನೀರನ್ನು ನೇರವಾಗಿ ಮನೆಯ ಪರಿಸರಕ್ಕೆ ಹರಿದು ಬಿಡುತ್ತಿದ್ದು, ಪರಿಸರ ದುರ್ನಾತ ಬೀರುತ್ತಿದೆ. ಪರಿಸರದಲ್ಲಿ ಸೊಳ್ಳೆ, ಸೂಕ್ಷ್ಮಾಣುಗಳು ಶೇಖರಣೆಗೊಂಡು ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮನೆಯಲ್ಲಿ ವಾಸವಾಗಿರುವ ಮಕ್ಕಳು ಹಾಗೂ ಹಿರಿಯ ನಾಗರಿಕರು ಶ್ವಾಸಕೋಶದ ತೊಂದರೆ ಅನುಭವಿಸುವ ಆತಂಕ ಕೂಡ ಇದ್ದು, ಮಕ್ಕಳ ಹಕ್ಕುಗಳ ಹಾಗೂ ಹಿರಿಯ ನಾಗರಿಕರ ಹಿತರಕ್ಷಣಾ ಕಾಯ್ದೆ ಉಲ್ಲಂಘನೆ ವಿರುದ್ಧ ಅಧಿಕಾರಿಗಳು ಗಂಭೀರ ಕ್ರಮ ಕೈಗೊಳ್ಳುವಂತೆ ದೂರುದಾರರು ಒತ್ತಾಯಿಸಿದ್ದಾರೆ. ಮನೆಯಂಗಳಕ್ಕೆ ಕೊಳಚೆ ನೀರು ಹರಿದು ಬರುತ್ತಿರುವ ಬಗ್ಗೆ ನೀಡಲಾದ ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಭೇಟಿ ನೀಡಿದ್ದು, ಇದರ ವಾಸ್ತವಾಂಶ ವರದಿಯನ್ನು ಮುಂದಿನ ಕ್ರಮಕ್ಕಾಗಿ ಪಿಡಿಓಗೆ ನೀಡಲಾಗಿದೆ ಎಂದು ಗ್ರಾ.ಪಂ.ಕಾರ್ಯದರ್ಶಿ ತಿಳಿಸಿದ್ದಾರೆ. ಸ್ವಚ್ಚತಾ ಪಾಠ ಯಾರಿಗೆ?ಮನೆಯ ಪರಿಸರ, ಸಾರ್ವತ್ರಿಕ ಸ್ಥಳಗಳನ್ನು ಕೊಳಚೆ, ತ್ಯಾಜ್ಯ ವಸ್ತುಗಳಿಂದ ಮುಕ್ತಗೊಳಿಸಿ ಸ್ವಚ್ಚತಾ ಜಾಗೃತಿ ಮೂಡಿಸುವಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಗ್ರಾ.ಪಂ. ವ್ಯಾಪ್ತಿಯಲ್ಲಿ ಮಾತ್ರ ಸ್ವಚ್ಚತಾ ನೀತಿ ಅನುಷ್ಠಾನವಾಗುತ್ತಿಲ್ಲ ಎಂದು ಆರೋಪಿಸಿರುವ ಗ್ರಾಮ ಗ್ರಾಮಸ್ಥರು, ಸ್ವಚ್ಚತಾ ಪಾಠ ಯಾರಿಗೆಂದು ಜಿ.ಪಂ. ಅಧಿಕಾರಿಗಳು ಉತ್ತರಿಸಬೇಕೆಂದು ಜನ ಪ್ರಶ್ನಿಸುತ್ತಿದ್ದಾರೆ.
ಜಿ.ಪಂ. ಅಧಿಕಾರಿಗಳು ಗಮನಿಸಲಿ!
ಕಳೆದೊಂದು ತಿಂಗಳಿನಿಂದ ಅಂಗಳದಲ್ಲಿ ಕೊಳಚೆ ರಾಡಿ ಶೇಖರಣೆಗೊಂಡಿದ್ದು, ನಕರಯಾತನೆ ಅನುಭವಿಸುತ್ತಿದ್ದರೂ, ಸ್ಥಳೀಯ ಗ್ರಾ.ಪಂ. ಅಧಿಕಾರಿಗಳು ಮಾತ್ರ ಇತ್ತ ಕಿವಿಯೇ ಹರಿಸಿಲ್ಲ. ಈ ಹಿನ್ನೆಲೆಯಲ್ಲಿ ಜಿ.ಪಂ. ಹಿರಿಯ ಅಧಿಕಾರಿಗಳು ಹಿರಿಯ ನಾಗರಿಕರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಪರಿಹರಿಸಲು ಗಮನ ಹರಿಸಬೇಕೆಂದು ಸಾಮಾಜಿಕ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.
