ಬಂಟ್ವಾಳ:ಸಮಾಜದಲ್ಲಿ ಕಲಾವಿದರನ್ನು ಗುರುತಿಸಿ ಗೌರವಿಸಿದಾಗ ಅವರಲ್ಲಿ ಮತ್ತಷ್ಟು ಹುಮ್ಮಸ್ಸು ಮೂಡುವುದರ ಜೊತೆಗೆ ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿ ಹೆಚ್ಚುತ್ತದೆ ಎಂದು ಯಕ್ಷಗಾನ ಕಲಾವಿದ ದಿನೇಶ ಶೆಟ್ಟಿ ಕಾವಳಕಟ್ಟೆ ಹೇಳಿದ್ದಾರೆ.
ಇಲ್ಲಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಮೈದಾನದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಸೋಮವಾರ ರಾತ್ರಿ ನಡೆದ ಕಟೀಲು ಮೇಳದ 27ನೇ ವರ್ಷದ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸ್ಥಳದಾನಿ, ರಾಯಿ ಗ್ರಾ.ಪಂ.ಸದಸ್ಯೆ ನಿರುಪಮಾ ಎಸ್.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೇಳದ ಮೆನೇಜರ್ ಶ್ರೀಧರ ಪಂಜಾಜೆ, ಪ್ರಮುಖರಾದ ಹರೀಶ ಶೆಟ್ಟಿ ಕೈತ್ರೋಡಿ, ತಾಚು ಪೂಜಾರಿ, ಸುಂದರ ಪೂಜಾರಿ, ಗಂಗಾಧರ ಸುವರ್ಣ, ಆನಂದ ಟೈಲರ್, ದಾಮೋದರ ಆಚಾರ್ಯ, ಆನಂದ ಪೂಜಾರಿ ಅಂತರ ಮತ್ತಿತರರು ಇದ್ದರು.ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಸ್ವಾಗತಿಸಿ, ರಶ್ಮಿತ್ ಶೆಟ್ಟಿ ಕೈತ್ರೋಡಿ ವಂದಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ಗಣ್ಯರು ಭೇಟಿ ನೀಡಿದರು.
