ಕಟೀಲು : ಪುರಾಣ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಈ ಬಾರಿಯ ಬ್ರಹ್ಮಕಲಶೋತ್ಸವ ಸಂದರ್ಭ ದೇವಸ್ಥಾನಕ್ಕೆ ಅತ್ಯಗತ್ಯವಾಗಿರುವ ಭೂದಾನ ಸೇವೆಗೆ ಹೆಚ್ಚು ಮಹತ್ವ ನೀಡಲಾಗಿದೆ. ದೇವಸ್ಥಾನ ಈಗಾಗಲೇ ಎರಡೂವರೆ ವಿದ್ಯಾರ್ಥಿಗಳಿರುವ ಐದು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ನದೀ ಮಧ್ಯದ ದ್ವೀಪದಲ್ಲಿರುವ ದೇವಸ್ಥಾನವಾಗಿರುವುದರಿಮದ ದೇವಸ್ಥಾನದ ಒಳಗೂ ಸಾಕಷ್ಟು ಸ್ಥಳಾವಕಾಶದ ಕೊರತೆ ಇದೆ. ದಿನಂಪ್ರತಿ ಕಟೀಲಿಗೆ ಬರುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂರು ಹೊತ್ತಿನ ಅನ್ನಪ್ರಸಾದ ನೀಡಲಾಗುತ್ತಿದೆ.
ಆದರೆ ದೊಡ್ಡ ಸಂಖ್ಯೆಯಲ್ಲಿ ವಸತಿ ಗೃಹ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಬಸ್‌ಸ್ಟ್ಯಾಂಡ್ ಕೂಡ ಚಿಕ್ಕದಾಗಿದೆ. ಕೆಲವು ದಿನಗಳಲ್ಲಿ ಇಪ್ಪತ್ತು ಮೂವತ್ತು ಮದುವೆ ನಡೆಯುವುದರಿಂದ ವಾಹನಗಳ ದಟ್ಟಣೆ ಮಿತಿಮೀರಿ ರಸ್ತೆ ಬ್ಲಾಕ್ ಆಗುವುದು ಸಾಮಾನ್ಯವಾಗಿದೆ. ಆದರೆ ಇದೀಗ ಬಜಪೆ ಕಟೀಲು ಕಿನ್ನಿಗೋಳಿ ಹಾಗೂ ಉಲ್ಲಂಜೆ ರಸ್ತೆಗಳನ್ನು ಅಗಲಗೊಳಿಸುವ ಕಾಮಗಾರಿ ಚುರುಕಾಗಿದ್ದು, ಈ ಸಮಸ್ಯೆ ಪರಿಹಾರವಾಗಲಿದೆ. ಆದರೆ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ಪಾರ‍್ಕಿಂಗ್ ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾದರೆ, ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದಲೂ ಸ್ಥಳಾವಕಾಶ ಹೆಚ್ಚಬೇಕಾಗಿದೆ.
ಈ ನಿಟ್ಟಿನಲ್ಲಿ ರಥಬೀದಿ ಅಗಲಗೊಳ್ಳುತ್ತಿದೆ. ಹಳೆ ಕಟ್ಟಡಗಳನ್ನು ಕೆಡವಲಾಗುತ್ತಿದೆ. ದೇವಸ್ಥಾನ ಅಂಗಡಿ ಮಾಲಿಕರನ್ನೂ ಮನ ಒಲಿಸಿ, ತೆಗೆಯಲಾಗುತ್ತಿದ್ದು, ನದೀ ಮಧ್ಯದ ದೇವಸ್ಥಾನ ನೇರವಾಗಿ ಹೊರಬದಿಗೆ ಕಾಣಿಸಲಿದೆ. ಈ ಮಧ್ಯೆ ದೇವಸ್ಥಾನಕ್ಕೆ ಜಮೀನು ಖರೀದಿಸಿ ನೀಡುವ ಭೂದಾನ ಸೇವೆಯನ್ನು ಭಕ್ತರೇ ಆರಂಭಿಸಿದ್ದಾರೆ. ಬ್ರಹ್ಮಕಲಶೋತ್ಸವಕ್ಕಾಗಿ ಅನೇಕ ಮಂದಿ ಸ್ವಯಂಸ್ಪೂರ್ತಿಯಿಂದ ತಮ್ಮ ಜಮೀನನ್ನು ಪಾರ‍್ಕಿಂಗ್ ಗಾಗಿ ನೀಡುತ್ತಿದ್ದಾರೆ. ದೇವಸ್ಥಾನದ ಸಮೀಪದಲ್ಲಿರುವ ಸಿತ್ಲದಲ್ಲಿ ಈಗಾಗಲೇ ಆರು ಎಕರೆ ಎಪ್ಪತ್ತೊಂದು ಸೆಂಟ್ಸ್ ಜಮೀನು ಇದ್ದು ಇಲ್ಲಿ ಬ್ರಹ್ಮಕಲಶೋತ್ಸವದ ಅನ್ನಪ್ರಸಾದಕ್ಕಾಗಿ ಚಪ್ಪರ ಹಾಕಲಾಗುತ್ತಿದೆ.
ಇಲ್ಲಿರುವ ಜಮೀನನ್ನೇ ಖರೀದಿಸಿ ದೇವಸ್ಥಾನಕ್ಕೆ ನೀಡಲು ಭಕ್ತರು ಉತ್ಸುಕರಾಗಿದ್ದು, ಎರಡು ಎಕರೆ ಜಮೀನು ಖರೀದಿಗೆ ಚಾಲನೆ ಸಿಕ್ಕಿದೆ. ಕಟೀಲು ದೇವಸ್ಥಾನಕ್ಕೆ ಜಮೀನು ಖರೀದಿಸಿ ನೀಡುವುದಕ್ಕಾಗಿ ಬ್ರಹ್ಮಕಲಶೋತ್ಸವದ ಬೆಂಗಳೂರು, ಮುಂಬೈ ಹಾಗೂ ಪುಣೆ ಸಮಿತಿಗಳು ಕಾರ‍್ಯಪ್ರವೃತ್ತವಾಗಿವೆ. ಮಾಣಿಲ ಸ್ವಾಮೀಜಿ ತನ್ನ ಟ್ರಸ್ಟ್ ವತಿಯಿಂದ ಮೂರು ಸೆಂಟ್ಸ್ ಜಮೀನು ಖರೀದಿಗೆ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಅನೇಕ ಮಂದಿ ಈ ಭೂದಾನ ಸೇವೆಗೆ ಮುಂದಾಗಿದ್ದಾರೆ. ಇತರ ಸೇವೆಗಳಂತೆ ಕಟೀಲು ದೇವರಿಗೆ ಭೂದಾನ ನೀಡುವ ಸೇವೆಯೂ ಪುಣ್ಯದಾಯಕವಾಗಿದೆ ಎಂದು ಭಕ್ತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದ್ದು, ಸ್ಥಳೀಯರು ತಮ್ಮ ಅಮೂಲ್ಯ ಭೂಮಿಯನ್ನು ದೇವಸ್ಥಾನಕ್ಕಾಗಿ ಖರೀದಿಸುವುದಾದರೆ ನೀಡುವುದಾಗಿ ಒಪ್ಪಿದ್ದಾರೆ. ದೇಗುಲದ ಆಸುಪಾಸಿನವರೂ ’ದೇವರಿಗಾಗಿ’ ಎಂದು ತಮ್ಮ ಭೂಮಿಯನ್ನು ಮಾರಾಟ ಮಾಡಲು ಒಪ್ಪುತ್ತಿದ್ದಾರೆ. ಹಾಗಾಗಿ ಭೂದಾನ ಸೇವೆಗೆ ಭಕ್ತರನ್ನು ಪ್ರೇರೇಪಿಸಲು ಸಮಿತಿಗಳು ಮುಂದಾಗುತ್ತಿದ್ದು, ಬ್ರಹ್ಮಕಲಶೋತ್ಸವ ಸಭೆಗಳಲ್ಲೂ ವಿನಂತಿಸಲಾಗುತ್ತಿದೆ.
ದೇಗುಲಕ್ಕೆ ಹದಿನೈದರಿಂದ ಇಪ್ಪತ್ತು ಎಕರೆಯಷ್ಟು ಜಮೀನು ಖರೀದಿಗೆ ಚಿಂತಿಸಲಾಗಿದ್ದು, ಕಾನೂನುಗಳ ಕಾರಣಕ್ಕಾಗಿ ದೇವಸ್ಥಾನವೇ ನೇರವಾಗಿ ಜಮೀನನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ಭಕ್ತರೇ ಸ್ಥಳ ಖರೀದಿಸುವ ಯೋಜನೆಗೆ ಮುಂದಾಗಿದ್ದಾರೆ. ದೇವರಿಗೆ ಬಂಗಾರ, ಬೆಳ್ಳಿ ಹೀಗೆ ಅನೇಕ ವಸ್ತುಗಳನ್ನು ನೀಡುವ ಭಕ್ತರು ಕಟೀಲು ದೇವಿ ತಮ್ಮ ಕಷ್ಟಗಳನ್ನು ಕಳೆದು, ಸಂಪತ್ತನ್ನು ಹೆಚ್ಚಿಸಲಿ ಎಂದು ನಂಬಿ ಪ್ರಾರ್ಥಿಸುತ್ತಾರೆ. ಹಾಗೆಯೇ ಕಟೀಲು ದೇವರಿಗೆ ಭೂಮಿ ಖರೀದಿಸುವ ಕಾರ‍್ಯಕ್ಕೆ ತಮ್ಮ ಕಾಣಿಕೆ ನೀಡಿದರೆ ತಮ್ಮ ಭೂಮಿಯೂ ಹೆಚ್ಚುತ್ತದೆ ಎಂಬ ನಂಬಿಕೆಯಿಂದ ಈ ಭೂದಾನ ಸೇವೆಗೆ ಹೆಚ್ಚು ಮಹತ್ವ ಬರುತ್ತಿದೆ. ಭಕ್ತರು ಈ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಈ ಸೇವೆಗೆ ಮುಂದಾಗುತ್ತಿದ್ದಾರೆ.
ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು
ಕಟೀಲಿನ ಭಕ್ತರು.
