ಬಂಟ್ವಾಳ: ಲೋಕೋಪಯೋಗಿ ಇಲಾಖಾ ಅಪೆಂಡಿಕ್ಸ್- ಇ ಯೋಜನೆಯಡಿ 2018-19 ಸಾಲಿಗೆ ಬಂಟ್ವಾಳದ ಅಣ್ಣಳಿಕೆ-ಕರಿಮಲೆ ರಸ್ತೆಗೆ 2 ಕೋ.ರೂ.ಸಹಿತ ಕ್ಷೇತ್ರದ ವಿವಿಧ ರಸ್ತೆಗಳ ಅಭಿವೃದ್ದಿಗೆ 9.63 ಕೋ.ರೂ.ಅನುದಾನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು ಸಲ್ಲಿಸಿದ ಪ್ರಸ್ತಾಪಕ್ಕೆ ಮಂಜೂರಾತಿ ನೀಡಿದೆಯೇ ಹೊರತು ಮಾಜಿ ಸಚಿವ ರಮಾನಾಥ ರೈ ಅವರು ಕೊಟ್ಟ ಪ್ರಸ್ತಾಪಕ್ಕಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಶನಿವಾರ ಬಿ.ಸಿ.ರೋಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎರಡು ದಿನಗಳ ಹಿಂದೆ ರಮಾನಾಥ ರೈ ಅವರು ರೇವಣ್ಣ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ತನ್ನ ಪ್ರಸ್ತಾಪದ ವಿವಿಧ ರಸ್ತೆ ಅಭಿವೃದ್ದಿಗೆ ೮ ಕೋ.ರೂ.ಬಿಡುಗಡೆಗೊಳಿಸಿದ್ದಾರೆ ಎಂದು ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದರು. 
೨೦೧೭-೧೮ ರಲ್ಲಿ ರೈಯವರು ಪ್ರಸ್ತಾಪ ಸಲ್ಲಿಸಿರಬಹುದು ಆದರೆ ಆಗ ಅದಕ್ಕೆ ಅನುದಾನ ಮಂಜೂರಾತಿಯಾಗಿರಲಿಲ್ಲ, ಬಳಿಕ ಅಣ್ಣಳಿಕೆ-ಕರಿಮಲೆ ಗ್ರಾಮಸ್ಥರ ಬೇಡಿಕೆಯಂತೆ ವಿಶೇಷ ಮುತುವರ್ಜಿ ವಹಿಸಿ ಶಾಸಕ ರಾಜೇಶ್ ನಾಯ್ಕ್ ಅವರು ಸಲ್ಲಿಸಿದ ಹೊಸ ಪ್ರಸ್ತಾಪಕ್ಕೆ ಆಗಿನ ಲೋಕೋಪಯೋಗಿ ಸಚಿವ ರೇವಣ್ಣ ಅವರು ೨ ಕೋ.ರೂ ಮಂಜೂರಾತಿ ನೀಡಿದ್ದಾರೆ ಎಂದು ದಾಖಲೆ ಸಮೇತ ಸ್ಪಷ್ಟಪಡಿಸಿದರು. ರೈ ಜನಪ್ರತಿನಿಧಿ ಅಲ್ಲ: ರಮಾನಾಥರೈ ಅವರು ಈಗ ಯಾವ ಜನಪ್ರತಿನಿಧಿಯು ಅಲ್ಲ,ಅವರೊಬ್ಬ ಸಾಮಾನ್ಯ ಮತದಾರ, ಅವರು ರಸ್ತೆ ಅಭಿವೃದ್ದಿಗೆ ಸಲ್ಲಿಸಿದ್ದಾರೆನ್ನಲಾದ ಪ್ರಸ್ತಾಪಕ್ಕೆ ಲೋಕೋಪಯೋಗಿ ಮಂತ್ರಿಯಾಗಿದ್ದ ರೇವಣ್ಣರವರು ಲೇಟರ್ ಹೆಡ್ ,ಸಹಿ ಇಲ್ಲದ ಪತ್ರಕ್ಕೆ ಟಿಪ್ಪಣಿಯನ್ನು ಮಾತ್ರ ಹಾಕಿದ್ದಾರೆ ಎಂದು ಹೇಳಿದರು. ರಮಾನಾಥ ರೈ ಅವರು ಜನರಿಗೆ ಮಾತ್ರವಲ್ಲ ಪಂಜಿಕಲ್ಲಿನ ಗರಡಿಯ ಕೋಟಿ ,ಚೆನ್ನಯರ ಮುಂದೆಯು ಸುಳ್ಳು ಹೇಳುವ ಮೂಲಕ ತಮ್ಮ ರಾಜಕೀಯ ದಿವಾಳಿತನವನ್ನು ತೋರಿಸಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ ಟೀಕಿಸಿದರು. ರೈ ಅವರ ಇಂತಹ ಕೀಳುಮಟ್ಟದ ಮತ್ತು ದ್ವೇಷದ ರಾಜಕಾರಣಕ್ಕೆ ಕಳೆದ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದ ಜನ ತಕ್ಕ ಪಾಠ ನೀಡಿದ್ದು ,ಇವರು ಸಚಿವರಾಗಿದ್ದ ಕಾಲದಲ್ಲು ಕ್ಷೇತ್ರದಲ್ಲಿ ಏನೂ ಸಾಧನೆ ಮಾಡಿಲ್ಲ, ಚುನಾವಣಾ ಕಾಲದಲ್ಲಿ ಅಭಿವೃದ್ದಿ ಪಡಿಸುವ ಮಾತುಕೊಟ್ಟಿದ್ದ ೬ ರಸ್ತೆ ಈಗಲು ಹಾಗೆ ಇದೆ. ಇವರಿಗೆ ತಾಕತ್ತು ಇದ್ದರೆ ಆಗ ಅನುದಾನ ಮಂಜೂರು ಮಾಡಿಸಿ ಈ ರಸ್ತೆಯನ್ನು ಅಭಿವೃದ್ದಿ ಪಡಿಸಿ ತೋರಿಸಬಹುದಿತ್ತು, ಅನುದಾನ ಮಂಜೂರಾತಿಗೆ ಮುನ್ನವೇ ಮಾಡಿಸಿರುವ ಕೆಲಸದಿಂದ ಈಗ ಗುತ್ತಿಗೆದಾರರು ಕಂಗಾಲಾಗಿದ್ದಾರೆ ಎಂದರು. ಇದೀಗ ಶಾಸಕ ರಾಜೇಶ್ ನಾಯ್ಕ್ ಅವರ ಕಾರ್ಯವೈಖರಿ,ಜನಪ್ರಿಯತೆಯಿಂದ ಹತಾಶರಾಗಿರುವ ರಮಾನಾಥ ರೈ ಅವರು ಭವಿಷ್ಯದಲ್ಲಿ ತನ್ನ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ಬೀಳಬಹುದೆಂದು ಅರಿತು ಈ ರೀತಿಯ ಚಿಲ್ಲರೆ ರಾಜಕಾರಣದಲ್ಲಿ ತೊಡಗಿದ್ದಾರೆಂದು ಟೀಕಾಪ್ರಹಾರಗೈದರು. ರಮಾನಾಥ ರೈ ಅವರು ಈಗ ಅಧಿಕಾರವಿಲ್ಲದೆ ನೀರಿನಿಂದ ಹೊರತೆಗೆದ ಮೀನಿನಂತಾಗಿದ್ದಾರೆ ಎಂದ ವಾಗ್ದಾಳಿಗೈದ ಹರಿಕೃಷ್ಣ ಬಂಟ್ವಾಳ ಬಿಜೆಪಿ ಯಾವತ್ತು ರೈಯವರ ಬಗ್ಗೆ ಕೇಡನ್ನು ಬಯಸುವುದಿಲ್ಲ, ಆದರೆ ಅವರ ನರಿಬುದ್ದಿಯ, ಕೀಳುಮಟ್ಟ ರಾಜಕಾರಣವನ್ನು ಮಾತ್ರ ಬಿಜೆಪಿ ಎಂದೂ ಸಹಿಸುವುದಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೇವದಾಸ ಶೆಟ್ಟಿ,ತುಂಗಪ್ಪ ಬಂಗೇರ,ಸಂದೇಶ್ ಶೆಟ್ಟಿ,ಗಣೇಶ್ ರೈ ಮಾಣಿ,ಸುದರ್ಶನ್ ಬಜ,ರಮಾನಾಥ ರಾಯಿ,ಸೀತಾರಾಮ ಪೂಜಾರಿ,ಪುರುಷೋತ್ತಮ ಶೆಟ್ಟಿ ಮೊದಲಾದವರಿದ್ದರು.
