ಕೋಲಾರ : ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಪ್ರಭಲವಾದ ಕಾಯ್ದೆಯನ್ನು ಜಾರಿಗೆ ತಂದು ಹೈದರಾಬಾದಿನ ಪಶುವೈದ್ಯೆ ಪ್ರಿಯಾಂಕರೆಡ್ಡಿ ಮೇಲೆ ಅತ್ಯಾಚಾರ ಮಾಡಿರುವ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ರೈತಸಂಘದಿಂದ ಮೆಕ್ಕೆ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿ, ಅತ್ಯಾಚಾರಿಗಳ ಮೇಲೆ ಕಲ್ಲುಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಿ, ತಾಲೂಕು ಆಡಳಿತ ಮುಖಾಂತರ ಗೌರವಾನ್ವಿತ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಇಡೀ ದೇಶವೇ ಬೆಚ್ಚಿಬೀಳಿಸಿದ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ಪ್ರಭಲವಾದ ಕಾನೂನು ಕಾಯ್ದೆ ಜಾರಿಯಾಗುತ್ತದೆ ಎಂದು ಎದುರು ನೋಡುತ್ತಿದ್ದ 125 ಕೋಟಿ ಭಾರತದ ಪ್ರಜೆಗಳಿಗೆ ಮತ್ತೆ ಹೈದರಾಬಾದ್ ಪಶು ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ ಜನಸಾಮಾನ್ಯರಲ್ಲಿ ಕಾನೂನು ಮತ್ತು ಸಂವಿಧಾನದ ಮೇಲೆ ಇದ್ದ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಜೊತೆಗೆ ದಿನೇ ದಿನೇ ಪ್ರಜಾಪ್ರಭುತ್ವದ ವ್ಯವಸ್ಥೆಕಗ್ಗೊಲೆಯಾಗುತ್ತಿದೆ. ಜನ ಸಾಮಾನ್ಯರು ಸಮಸ್ಯೆಗಳಿಗೆ ಸರಕಾರಗಳು ಸ್ಪಂದಿಸದ ಜೊತೆಗೆ ದೇಶದ ಜನರ ಸೇವಕರಾಗಬೇಕಾದ ಜನಪ್ರತಿನಿಧಿಗಳು ಬಣ್ಣ ಬದಲಿಸುವ ಊಸರವಳ್ಳಿಯಂತೆ ದಿನಕ್ಕೊಂದು ಪಕ್ಷಕ್ಕೆ ಪಕ್ಷಾಂತರಗೊಳ್ಳುವ ಜೊತೆಗೆ ಸಂತೆಯಲ್ಲಿ ಮಾರಾಟವಾಗುವ ಜಾನುವಾರಗಳಂತೆ ಕೋಟಿಕೋಟಿ ಹಣಕ್ಕೆ ಮಾರಾಟವಾಗಿ ದಿನಕ್ಕೊಂದು ಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವುದು ಒಂದು ಕಡೆಯಾದರೆ ದೇಶದ ಕಾನೂನು ವ್ಯವಸ್ಥೆಯನ್ನು ಕಾಪಾಡಬೇಕಾದ ಪೊಲೀಸ್ ಇಲಾಖೆ ಇರುವ ಸಿಬ್ಬಂದಿಯನ್ನು ರಾಜಕಾರಣಿಗಳಿಗೆ ಭದ್ರತೆ ಒದಗಿಸುವುದೇ ಸವಾಲಾಗಿರುವುದರಿಂದ ದೇಶದಲ್ಲಿ ನಡೆಯುತ್ತಿರುವ ಅಪರಾಧ ಅತ್ಯಾಚಾರಗಳಿಗೆ ಕಡಿವಾಣ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ನೂರಾರು ಕನಸುಗಳು ಕಂಡು ಬಾಳಿಬದುಕಬೇಕಾದ ಹೆಣ್ಣುಮಗಳ ಮೇಲೆ ನಡೆದಿರುವ ಅತ್ಯಾಚಾರ ಸಮಾಜ ತಲೆತಗ್ಗಿಸಬೇಕಾದ ವಿಚಾರ. ದೇಶಾದ್ಯಂತ ಒಂದಲ್ಲದ ಒಂದು ರೀತಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಯುತ್ತಿದ್ದರೂ ಮಾನಗೆಟ್ಟ ರಾಜಕಾರಣಿಗಳಿಗೆ ನಾಚಿಕೆ ಇಲ್ಲದಂತಾಗಿದೆ. ಅಧಿಕಾರ ಹಣ ಆಸ್ತಿ ಮಾಡುವ ದಂಧೆಯಲ್ಲಿ ತೊಡಗಿ ಜನಸಾಮಾನ್ಯರನ್ನು ಮರೆತು ಹಿಟ್ಲರ್ ಆಡಳಿತ ದೇಶದಲ್ಲಿ ನಡೆಯುತ್ತಿರುವ ಜೊತೆಗೆ ಒಬ್ಬ ರಾಜಕಾರಣಿ ಮನೆಯಿಂದ ಹೊರಬರಬೇಕಾದರೆ ನೂರು ಜನರ ಪೊಲೀಸ್ ಭದ್ರತೆ ಪಡೆಯುತ್ತಿದ್ದರೆ ಇನ್ನು ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಮತ್ತು ಭದ್ರತೆ ನೀಡುವವರು ಯಾರು ಎಂಬುದರ ಜೊತೆಗೆ ಇಂದು ದಿನೇದಿನೇ ಕುಸಿಯುತ್ತಿರುವ ಪ್ರಜಾಪ್ರಭುತ್ವದ ಹಾಗೂ ರಾಜಕಾರಣಿಗಳ ವೈಫಲ್ಯತೆಗಳೇ ಅಪರಾಧವೆಸಗುವ ಯುವಪೀಳಿಗೆಗೆ ಮಾರಕವಾಗಿದೆಯೇ? ಕಾನೂನು ಭಯವಿಲ್ಲದೆ ನಡೆಯುತ್ತಿರುವ ಮಾಧಕ ವಸ್ತುಗಳ ಹಗಲುಮಾರಾಟ ಹಾದಿ ತಪ್ಪಿರುವ ಶಿಕ್ಷಣ ಸಮಸ್ಯೆಗಳ ಆಧುನಿಕ ಜೀವನಕ್ಕೆ ಪರಿಪಾಠವೇ ಇಲ್ಲವೇ ದೇಶದಲ್ಲಿ ಕಾನೂನು ಎಂಬುದೇ ಜನಸಾಮಾನ್ಯರಿಗೆ ಇಲ್ಲದಂತಾಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಮಹಿಳೆಯರು ಮತ್ತು ಜನಸಾಮಾನ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರಕ್ಕೆ ಅಂತ್ಯ ಹೇಳಲು ಪ್ರಭಲವಾದ ಕಾಯ್ದೆ ಜಾರಿಗೆ ತರುವ ಜೊತೆಗೆ ಅಪರಾಧಿಗಳಿಗೆ ಯಾವುದೇ ವಿಚಾರಣೆ, ಭದ್ರತೆ ಇಲ್ಲದೆ 24 ಗಂಟೆಯಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಅಂತ್ಯ ಹೇಳಬೇಕು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶೋಭಿತ, ಪ್ರಜ್ಞಾವಂತರಿರುವ ದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಸಮಾಜ ತಲೆತಗ್ಗಿಸಬೇಕಾದ ಕೃತ್ಯ ಅದರಲ್ಲೂ ಬಾಳಿ ಬದುಕಬೇಕಾದ ಹೆಣ್ಣುಮಕ್ಕಳನ್ನು ಗುರಿ ಮಾಡುತ್ತಿದ್ದರೂ ಸರ್ಕಾರಗಳು ಪ್ರಭಲವಾದ ಕಾನೂನು ಕಾಯ್ದೆ ಜಾರಿ ಮಾಡುವಲ್ಲಿ ವಿಫಲವಾಗಿ ಕಾನೂನಿನಲ್ಲಿ ಅಪರಾಧಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂದು ಅಸಮಧಾನವ್ಯಕ್ತಪಡಿಸುವ ಜೊತೆಗೆ ನಿಮ್ಮ ಮನವಿಯನ್ನು ಕೂಡಲೇ ಮಾನ್ಯ ರಾಷ್ಟ್ರಪತಿಗಳಿಗೆ ಕಳುಹಿಸುವ ಭರವಸೆ ನೀಡಿದರು. ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಪುತ್ತೇರಿರಾಜು, ಮೀಸೆ ವೆಂಕಟೇಶಪ್ಪ, ಮಂಗಸಂದ್ರ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಕುವ್ವಣ್ಣ, ಸುಪ್ರಿಂಚಲ, ಚಂಗಲರಾಯಪ್ಪ ಉಪಸ್ಥಿತರಿದ್ದರು.


