ಕೋಲಾರ: ಪ್ರತಿ ತಿಂಗಳಿಗೊಮ್ಮೆ ಜಿಲ್ಲೆಯಲ್ಲಿ ಉಚಿತ ಡಿಎಲ್ ಮೇಳ ಆಯೋಜನೆ ಮಾಡಬೇಕು ಹಾಗೂ ಕೋಲಾರ, ಕೆಜಿಎಫ್ ಆರ್‍ಟಿಒ ಕಚೇರಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸೂಕ್ತ ಅಧಿಕಾರಿಗಳಿಂದ ತನಿಖೆ ನಡೆಸಿ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ರೈತ ಸಂಘದಿಂದ ಆಯುಕ್ತರಾದ ಹರ್ಷಗುಪ್ತರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಜಿಲ್ಲಾದ್ಯಕ್ಷೆ ಎ.ನಳಿನಿ ಮಾತನಾಡಿ ಸರ್ಕಾರಗಳು ಬದಲಾವಣೆಯಾದಂತೆ ಸಾರಿಗೆ ಸಚಿವರು ಒಂದೊಂದು ಸರ್ಕಾರದಲ್ಲಿ ತಮಗೆ ಮನಸ್ಸಿಗೆ ಬಂದಹಾಗೆ ನಿಯಮಗಳನ್ನು ಜಾರಿಗೆ ತಂದು ಜನಸಾಮಾನ್ಯರ ಜೊತೆ ಚೆಲ್ಲಾಟವಾಡುತ್ತಾರೆ. ಸರ್ಕಾರಗಳ ನಿಯಮಗಳನ್ನೇ ಬಂಡವಾಳವಾಗಿಸಿಕೊಳ್ಳುವ ಆರ್‍ಟಿಒ ಇಲಾಖೆ ಅಧಿಕಾರಿಗಳು ದಲ್ಲಾಳಿಗಳ ಮುಖಾಂತರ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿದ್ದಾರೆ.
ಜಿಲ್ಲಾಧ್ಯಂತ ಖಾಸಗಿ ಬಸ್ಸುಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸುವ ಜೊತೆಗೆ ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಸಂಚರಿಸಬೇಕಾದ ಬಸ್ಸುಗಳು ಹೆದ್ದಾರಿಗಳಲ್ಲಿ ಸಂಚರಿಸುವ ಜೊತೆಗೆ ಒಂದೇ ನಂಬರಿನ ಎರಡು, ಮೂರು ಬಸ್ಸುಗಳು ಓಡಾಡುತ್ತಿದ್ದರೂ ಆರ್‍ಟಿಒ ಅಧಿಕಾರಿಗಳು ತಿಂಗಳಿಗೆ ನಿಗಧಿ ಮಾಡಿರುವ ಕಮೀಷನ್ ಪಡೆದು ಮೌನವಾಗಿದ್ದಾರೆ. ಅದರ ಜೊತೆಗೆ ಕೋಲಾರ ಆರ್‍ಟಿಒ ಕಚೇರಿಯಲ್ಲಿ ಆರ್‍ಟಿಒ ಅಧಿಕಾರಿಗಿಂತ ಒಬ್ಬ ದಿನಗೂಲಿ ನೌಕರರಾದ ಮಂಜುನಾಥ್ (ಹೋಂ ಗಾರ್ಡ್) ಈ ವ್ಯಕ್ತಿಯು ಆರ್‍ಟಿಒ ಕಚೇರಿಯಲ್ಲಿನ ಎಲ್ಲಾ ದಂಧೆಗಳ ಮುಖ್ಯ ರೂವಾರಿಯಾಗುವ ಜೊತೆಗೆ ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದಾನೆ. ಈ ಪರಿಸ್ಥಿತಿ ಕೋಲಾರ ಆರ್‍ಟಿಒ ಕಚೇರಿಯ ಪರಿಸ್ಥಿತಿಯಾದರೆ ಇನ್ನು ಕೆಜಿಎಫ್ ಆರ್‍ಟಿಒ ಬಗ್ಗೆ ಕೇಳುವ ಆಗಿಲ್ಲ. ಪ್ರತಿ ವಾಹನದ ಎಫ್‍ಸಿಗೆ 5000 ದಿಂದ 15000 ಹಣವನ್ನು ಅರುಣ್‍ಬಾಬು ಎಂಬ ವ್ಯಕ್ತಿ ವಸೂಲಿ ಮಾಡುತ್ತಾನೆ. ಸುಮಾರು 250ಕ್ಕೂ ಹೆಚ್ಚು ದಲ್ಲಾಳಿಗಳನ್ನು ಹೊಂದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಕಚೇರಿಯ ಎ ಆರ್‍ಟಿಒ ಕೃಷ್ಣಮೂರ್ತಿಯಂತೂ ಮೈಮೇಲೆ ದೇವರು ಬಂದ ಹಾಗೆ ಜನಸಾಮಾನ್ಯರ ಹಾಗೂ ಕಚೇರಿಯ ಅವ್ಯವಸ್ಥೆ ಕೇಳಲು ಬರುವ ಮಾಧ್ಯಮ, ಸಂಘಟನೆಗಳ ವಿರುದ್ಧ ಅಲ್ಲಿನ ದಲ್ಲಾಳಿಗಳನ್ನೇ ಎತ್ತಿಕಟ್ಟಿ ಗಲಭೆಗಳನ್ನು ಸೃಷ್ಠಿ ಮಾಡುವ ಜೊತೆಗೆ ಅವರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸುತ್ತಾನೆಂದು ಆರೋಪಿಸಿದರು.
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಡಿಎಲ್ ಪಡೆಯಲು ಅಭ್ಯರ್ಥಿ ಇಲ್ಲದಿದ್ದರೂ 5 ಸಾವಿರ ಕೊಟ್ಟರೂ ಸಂಜೆ ಅವರ ಮನೆ ಸೇರುತ್ತದೆ. ಇನ್ನು ಎಲ್‍ಎಲ್‍ಆರ್, ಡಿಎಲ್ ವಸೂಲಿ ಮಾಡಲು ದಯಾಳ್ ಎಂಬ ಬ್ರೋಕರ್ ಪ್ರತಿನಿತ್ಯ ವಸೂಲಿ ಮಾಡುತ್ತಾನೆ. ಅದರ ಜೊತೆಗೆ ಪ್ರತಿ ಕಡೆ ಹೊರಗುತ್ತಿಗೆ ಆಧಾರದ ನರೇಶ್ ಎಂಬ ವ್ಯಕ್ತಿ 10 ರಿಂದ 20 ಸಾವಿರ ವಸೂಲಿ ಹಣ ನೀಡದೆ ಕಡೆ ಆರ್ಡರ್ ಆಗುವುದಿಲ್ಲ ಅದರ ಜೊತೆಗೆ ಎಲ್‍ಎಲ್‍ಆರ್ ಹಾಗೂ ಡಿಲ್ ಆನ್‍ಲೈನ್ ಅರ್ಜಿ ಸಲ್ಲಿಸದೇ ಇದ್ದರೂ ಲೈನ್ ಟೆಸ್ಟ್ ಇಲ್ಲದೆ 5000 ಕೊಟ್ಟರೆ ದಾಖಲೆ ನೀಡುತ್ತಾರೆ. ಇನ್ನು ಖಾಸಗಿ ಬಸ್ಸುಗಳು ಟಿಪ್ಪರ್ ಲಾರಿಗಳು ಮತ್ತಿತರ ಅಕ್ರಮಗಳಿಂದ ಲಕ್ಷಾಂತರರೂಪಾಯಿ ಹಣ ವಸೂಲಿ ಮಾಡಿ ಜನರ ಸುಲಿಗೆ ಮಾಡುವ ಜೊತೆಗೆ ದಲ್ಲಾಳಿಗಳಿಗೆ ಇಲಾಖೆಯನ್ನು ಅಡ ಇಟ್ಟಿದ್ದಾರೆ ಈ ಎರಡೂ ಆರ್‍ಟಿಒಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಯಾವಾಗ ಬೇಕಾದರೂ ಹಾಜರಾಗುತ್ತೇವೆ ಹಾಗೂ ಈ ಆರ್‍ಟಿಒಗಳಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಜನ ಸಾಮಾನ್ಯರನ್ನು ರಕ್ಷಣೆ ಮಾಡಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಡನೆ ಚರ್ಚೆ ಮಾಡಿ ಪ್ರತಿ ತಿಂಗಳಿಗೊಮ್ಮೆ ಉಚಿತ ಡಿಎಲ್ ಮೇಳ ಆಯೋಜನೆ ಮಾಡಬೇಕು ಮತ್ತು ಇಲಾಖೆಯ ವತಿಯಿಂದ ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡಿ ಸಮರ್ಪಕ ತನಿಖೆಯ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಜೊತೆಗೆ ಅಕ್ರಮ ಖಾಸಗಿ ಬಸ್ಸುಗಳ ಪರವಾನಗಿಯನ್ನು ರದ್ದುಮಾಡಬೇಕು ಅಗ್ರಹಿಸಿದರು.ಮನವಿ ಸ್ವೀಕರಿಸಿ ಮಾತನಾಡಿದ ಆಯುಕ್ತರಾದ ಹರ್ಷಗುಪ್ತರವರು ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಈ ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಅನುಶ್ರೀ, ಮಂಜುನಾಥ್, ಚಂದ್ರಪ್ಪ ಮುಂತಾದವರಿದ್ದರು.
