ಬಿ. ಸಿ. ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಬಂದಿರುವ ಸೇವಾ ಭಾರತಿ ಸಂಸ್ಥೆಯು ಬೆನ್ನುಮುರಿತಕ್ಕೊಳಗಾದವರ ಪುನಶ್ಚೇತನಕ್ಕಾಗಿ ಸೌತಡ್ಕದಲ್ಲಿ ಸೇವಾಧಾಮ ಸಂಸ್ಥೆಯನ್ನು ಆರಂಭಿಸಿದೆ ಎಂದರು. ಈಗಾಗಲೇ ಸುಮಾರು ೫೫ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಮೂರು ಮಂದಿ ಮತ್ತೆ ತಮ್ಮ ಹಿಂದಿನ ಕೆಲಸಕ್ಕೆ ಮರಳಿದ್ದು, ಮೂರು ಮಂದಿ ಸ್ವಾವಲಂಬಿ ಬದುಕು ಸಾಗಿಸುವಷ್ಟರಮಟ್ಟಿಗೆ ಗುಣಮುಖರಾಗಿದ್ದಾರೆ. ಬೆನ್ನುಮೂಳೆ ಮುರಿತಕ್ಕೊಳಗಾದವರ ಪುನಶ್ಚೇತನ ಕೇಂದ್ರಗಳು ಈ ಹಿಂದೆ ಕರ್ನಾಟಕದಲ್ಲಿ ಮೂರೇ ಇದ್ದು, ಸೇವಾಧಾಮವು ೪ನೇ ಕೇಂದ್ರವಾಗಿದೆ. ಬೆಂಗಳೂರಿನ ಎಪಿಡಿ ಸಂಸ್ಥೆಯು ಕೇಂದ್ರಕ್ಕೆ ತಾಂತ್ರಿಕ ಹಾಗೂ ಹಣಕಾಸಿನ ನೆರವು ನೀಡುತ್ತಿದೆ. ಪ್ರಸ್ತುತ ಹೆಚ್ಚಿನ ಸಂತ್ರಸ್ಥರು ಇದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ವಾರ್ಷಿಕ ೬ ಆರೋಗ್ಯ ತಪಸಣಾ ಶಿಬಿರವನ್ನು ಆಯೋಜಿಸುವ ಗುರಿ ಹೊಂದಲಾಗಿದೆ ಎಂದರು.
ಇದೀಗ ನ. ೧೪ರಿಂದ ೧೬ರ ವರೆಗೆ ತುಂಬೆ ಆಸ್ಪತ್ರೆಯಲ್ಲಿ ೩ನೇ ಶಿಬಿರ ನಡೆಯುತ್ತಿದ್ದು, ಬೆನ್ನು ಮೂಳೆ ಮುರಿತಕ್ಕೊಳಗಾದವರು ಉಚಿತವಾಗಿ ಈ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ. ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಮಾತೃಭೂಮಿ ತುಳುನಾಡ ಸೇವಾ ಟ್ರಸ್ಟ್ ಹಾಗೂ ಬೆಂಗಳೂರಿನ ಎಪಿಡಿ ಸಂಸ್ಥೆಯ ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ತಮ್ಮ ಜೀವನ ನಿರ್ವಹಣೆಗಾಗಿ ವಿವಿಧ ಮಾಹಿತಿ-ಮಾರ್ಗದರ್ಶನದ ಜತೆಗೆ ವಿವಿಧ ಸಲಕರಣೆಗಳ ಕಿಟ್ಟನ್ನು ಕೂಡ ನೀಡಲಾಗುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಚಂದನ್ ಗುಡಿಗಾರ್, ನವೀನ್, ಚಂದ್ರಶೇಖರ್ ಪೂಜಾರಿ, ಶ್ರೀನಿವಾಸ್ ಮೆಲ್ಕಾರ್ ಉಪಸ್ಥಿತರಿದ್ದರು.
ಬಂಟ್ವಾಳ : ಬೆನ್ನುಮುರಿತಕ್ಕೊಳಗಾದವರಿಗೆ ಮಾಹಿತಿ-ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕನ್ಯಾಡಿ ಸೇವಾಭಾರತಿ ಸಂಸ್ಥೆಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನ. ೧೪ರಿಂದ ೧೬ರ ವರೆಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸಿದೆ ಎಂದು ಸೇವಾಭಾರತಿ ಅಧ್ಯಕ್ಷ ವಿನಾಯಕ ರಾವ್ ಕನ್ಯಾಡಿ ತಿಳಿಸಿದರು.

