ಬಂಟ್ವಾಳ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸ್ಥಳೀಯವಾಗಿ ವಿವಿಧ ಮಾತೃಭಾಷೆಯನ್ನು ಹೊಂದಿದ್ದರೂ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ  ಮಹತ್ತರವಾದ ಕೊಡುಗೆ ನೀಡಿದ್ದಾರೆ ಎಂದು ಬಂಟ್ಟಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು.  ಬಂಟ್ವಾಳ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

DSC_2960

ಕನ್ನಡದ ಕಾಯಕ ನಿತ್ಯ ನಡೆಯಬೇಕು , ಕನ್ನಡವನ್ನು ಉಳಿಸಿ, ಬೆಳೆಸುವ ದೆಸೆಯಲ್ಲಿ ಕನ್ನಡಿಗರ ಚಿಂತನೆಗಳು ಬದಲಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ರಾಷ್ಟ್ರ ಧ್ವಜಾರೋಹಣಗೈದ ತಹಶೀಲ್ದಾರ್ ರಶ್ಮೀ ಎಸ್.ಆರ್. ರಾಜ್ಯೋತ್ಸವದ ಸಂದೇಶ ನೀಡುತ್ತಾ, ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರೆ ಮಾತ್ರ ಉತ್ತಮ ಹುದ್ದೆ ಸಿಗುತ್ತದೆ ಎಂಬ ತಪ್ಪು ಕಲ್ಪನೆಯನ್ನು ಬದಿಗಿಟ್ಟು ಕನ್ನಡ ಸಾಹಿತ್ಯವನ್ನು  ಮಕ್ಕಳಿಗೆ ಕಲಿಸುವುದರೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು, ಈ ಹಂತದಲ್ಲಿ ಕನ್ನಡದ ಉಳಿವಿಗೆ ಅಪಾರ ಕೊಡುಗೆ ನೀಡಿದ  ಬಂಟ್ವಾಳದ ಹಿರಿಯ ಸಾಹಿತಿಗಳಾದ ದಿವಂಗತ  ಪಂಜೆ ಮಂಗೇಶರಾಯರು, ಏರ್ಯ ಲಕ್ಷ್ಮೀನಾರಾಯಣ ಆಳ್ವರಂತ ಮಹನೀಯರನ್ನು ಸ್ಮರಿಸಿಕೊಳ್ಳಬೇಕು ಎಂದರು.

DSC_2959

ಶಾರದಾ ಪ್ರೌಢಶಾಲೆಯ ಶಿಕ್ಷಕ ಧನರಾಜ್ ಉಪನ್ಯಾಸ ನೀಡಿ, ಕನ್ನಡ ಭಾಷೆ ಕಡತದಲ್ಲಿ ಕೇವಲ ಆಡಳಿತ ಭಾಷೆಯಾಗದೆ, ಪ್ರತಿಯೊಬ್ಬರ ನಾಡಿಮಿಡಿತವಾಗಲಿ ಎಂದರು.ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ , ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ವೇದಿಕೆಯಲ್ಲಿದ್ದರು.  ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಉಪತಹಶೀಲ್ದಾರ್ ಶ್ರೀಧರ್ ವಂದಿಸಿದರು. ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಕಾರ್ಯಕ್ರಮ ನಿರ್ವಹಿಸಿದರು. ಧ್ವಜಾರೋಹಣದ ಬಳಿಕ ಪೊಲೀಸ್, ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸೇವಾದಳ, ಸ್ಕೌಟ್ ಗೈಡ್ಸ್, ಕಬ್ ಗೈಡ್ಸ್  ಬುಲ್ ಬುಲ್ ವಿವಿಧ ತುಕಡಿಗಳ ಪಥ ಸಂಚಲನ ನಡೆಯಿತು.ತಹಶೀಲ್ದಾರ್ ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸಿದರು. ಬಳಿಕ ಬಂಟ್ವಾಳ ಪುರಸಭೆ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

By suddi9

Leave a Reply

Your email address will not be published. Required fields are marked *