ಕೋಲಾರ: ಸರ್ಕಾರಿ ಸೇವೆಯಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು ಮತ್ತು ಸಮಾಜ ನಿರಂತರವಾಗಿ ಸ್ಮರಿಸುವ ಕಾಯಕ ಎಂದು ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ ತಿಳಿಸಿದರು.
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಪಾತಪಲ್ಲಿಯಲ್ಲಿ ಕಳೆದ 16 ವರ್ಷಗಳಿಂದ ಕನ್ನಡ ಶಿಕ್ಷಕರಾಗಿದ್ದು, ಇದೀಗ ತಮ್ಮ ಸ್ವಂತ ಜಿಲ್ಲೆಯಾದ ಬಾಗಲಕೋಟೆಗೆ ವರ್ಗಾವಣೆಯಾಗಿರುವ ಸಂಗಪ್ಪ ನಿಷ್ಟಿ ಅವರನ್ನು ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.

ಇತರೆ ವೃತ್ತಿಗಳಲ್ಲಿ ನಾವು ನಿವೃತ್ತಿಯಾದ ನಂತರ ಯಾರೂ ನಮ್ಮನ್ನು ಸ್ಮರಿಸುವುದಿಲ್ಲ, ಆದರೆ ನಾವು ದೇಶಕ್ಕೆ ಮಾನವ ಸಂಪನ್ಮೂಲ ನೀಡುವ ಅತ್ಯಂತ ಪವಿತ್ರ ಕೆಲಸ ಮಾಡುತ್ತಿದ್ದು, ನಮ್ಮನ್ನು ವಿದ್ಯಾರ್ಥಿಗಳು ಮುಂದೆ ಸಾಧಕರಾದ ನಂತರವೂ ಸ್ಮರಿಸುತ್ತಾರೆ ಎಂದರು. ಶಾಲೆಯ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಸಂಗಪ್ಪ ಅವರ ಸೇವೆಯನ್ನು ಮರೆಯಲು ಸಾಧ್ಯವಿಲ್ಲ, ಸರಳ,ಸಜ್ಜನರಾಗಿದ್ದು, ಮಕ್ಕಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಮುಂಚೂಣಿಯಲ್ಲಿ ಇರುತ್ತಿದ್ದರು ಎಂದು ತಿಳಿಸಿದರು. ಮುಖ್ಯ ಶಿಕ್ಷಕಿ ರೇಣುಕಾದೇವಿ, ಕಾರ್ಯಕ್ರಮದಲ್ಲಿ ಶಿಕ್ಷಕರಾದ ಟಿ.ಎ.ಪ್ರಸಾದ್‍ಬಾಬು, ರಾಮಪ್ರಸಾದ್, ಮಾಲತಿ, ಹಸೀನ್, ಬಿಇಒ ಕಚೇರಿಯ ಮೇಲ್ವಿಚಾರಕ ಶ್ರೀಧರ್, ದಿನೇಶ್‍ಬಾಬು ಮತ್ತು ಹಳೆ ವಿದ್ಯಾರ್ಥಿಗಳು ಹಾಜರಿದ್ದು, ಅವರನ್ನು ಬೀಳ್ಕೊಟ್ಟರು.
