ಮಂಗಳೂರು:ಸ್ಥಳೀಯ ಆಡಳಿತ ಪ್ರಾಧಿಕಾರದಿಂದ ಕಟ್ಟಡ ನಿರ್ಮಾಣ ಪರವಾನಗಿ ಪಡೆಯದೇ ಅನಧಿಕೃತವಾಗಿ ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ, ವಿದ್ಯಾಗಿರಿ ಎಸ್. ವಿ.ಎಸ್. ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಬಾಮಿ ವಿಠಲದಾಸ ಶೆಣೈಯವರಿಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ಜ್ಞಾಪನಾ ನೋಟೀಸ್ ಜಾರಿ ಮಾಡಿದ್ದಾರೆ. 
ಎಸ್.ವಿ.ಎಸ್. ಶಾಲಾ ಮೂರು ಅಂತಸ್ತಿನ ಕಟ್ಟಡವನ್ನು ಮಣ್ಣು ತುಂಬಿಸಿ ಸಮತಟ್ಟು ಮಾಡಲಾದ ನಿವೇಶನದಲ್ಲಿ ನಿರ್ಮಿಸಲಾಗಿದ್ದು, ಪುರಸಭೆಯಿಂದ ಯಾವುದೇ ಪರವಾನಗಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಯವರು ವರದಿ ಸಲ್ಲಿಸಿದ್ದರು. ಶಾಲಾ ನಿವೇಶನಕ್ಕೆ ತಡೆಗೋಡೆ ರಚಿಸದೇ ಕಟ್ಟಡ ನಿರ್ಮಿಸಿದ್ದರಿಂದ, ಮಕ್ಕಳ ಜೀವಕ್ಕೆ ಅಪಾಯ ಇರುವುದಾಗಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನೋಟೀಸ್ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ, ಪರವಾನಗಿ ಇಲ್ಲದೆ ನಿರ್ಮಿಸಲಾದ ಮೂರು ಅಂತಸ್ತಿನ ಕಟ್ಟಡದಿಂದ ಮಕ್ಕಳ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಸಂಬಂಧಿತ ಇಲಾಖಾಧಿಕಾರಿಗಳಿಂದ ದಾಖಲೆಗಳೊಂದಿಗೆ ಎರಡು ದಿನಗಳೊಳಗೆ ವಿವರಣೆ ಕೊಡುವಂತೆ ಎಚ್ಚರಿಸಿದ್ದಾರೆ.

ಶಾಲಾ ನೋಂದಣಿ ರದ್ದುಗೊಳಿಸಲು ಕ್ರಮ!
ದಿನಾಂಕ 19/09/2019ರಂದು ಕಚೇರಿ ಸಂಖ್ಯೆ: ಸಿ4.ದೂರು 1/2019-20ರಂತೆ ಜ್ಞಾಪನ ನೋಟೀಸ್ ಜಾರಿಗೊಳಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿಯವರು, ವಿವರಣೆ ಕೊಡಲು ತಪ್ಪಿದ್ದಲ್ಲಿ ಶಾಲೆಗೆ ನೀಡಿರುವ ನೋಂದಣಿ ರದ್ದು ಪಡಿಸಲು ಕ್ರಮಕೈಗೊಳ್ಳಲಾಗುವುದಾಗಿ ಎಚ್ಚರಿಸಿದ್ದಾರೆ.
