ಪುತ್ತೂರು : ರೈಲು ಸಂಚಾರದ ಛಾಯಾಚಿತ್ರ ಸೆರೆ ಹಿಡಿಯಲೆಂದು ಹೋಗಿದ್ದರೆನ್ನಲಾದ ವಿದ್ಯಾರ್ಥಿಗಳ ಪೈಕಿ ಒಬ್ಬಾಕೆ ರೈಲಿನಡಿಗೆ ಬಿದ್ದು ಮೃತಪಟ್ಟ ಮತ್ತು ಇನ್ನೊಬ್ಬಾಕೆ ವಿದ್ಯಾರ್ಥಿನಿ ಗಾಯಗೊಂಡ ಘಟನೆ ಪುತ್ತೂರು ಪೇಟೆಯ ಹೊರವಲಯದ ನೆಹರೂನಗರ ಸಮೀಪ ಭಾನುವಾರ ಸಂಜೆ ಸಂಭವಿಸಿದೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಸಯನ್ಸ್ ವಿದ್ಯಾರ್ಥಿನಿ, ಮಂಗಳೂರು ತಾಲೂಕಿನ ಕೊಂಚಾಡಿ ದೇರೆಬೈಲ್ ನಿವಾಸಿ ದಯಾನಂದ ಆಳ್ವ ಅವರ ಪುತ್ರಿ ವರ್ಷ ಆಳ್ವ (20) ಮೃತಪಟ್ಟವರು. ಆಕೆಯ ಜೊತೆಗಿದ್ದ ಸಹಪಾಠಿ ವಿದ್ಯಾರ್ಥಿನಿ ಪುತ್ತೂರು ತಾಲ್ಲೂಕಿನ ಈಶ್ವರಮಂಗಲ ನಿವಾಸಿ ರಚನಾ (20) ಗಾಯಗೊಂಡಿದ್ದಾರೆ. ಮೃತ ಹಾಗೂ ಗಾಯಾಳು ವಿದ್ಯಾರ್ಥಿನಿಯರು ಪುತ್ತೂರು ವಿವೇಕಾನಂದ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿಯರಾಗಿದ್ದಾರೆ.
ಅಪಘಾತ ನಡೆಯುವ ಮುಂಚೆ ಪುತ್ತೂರಿನ ನೆಹರೂ ಕ್ರೀಮ್ ಪಾರ್ಲರ್ ಸಮೀಪ ಗ್ರೂಫ್ ಫೊಟೋ ತೆಗೆದಿದ್ದು, ಅದರ ನಂತರ ಈ ಘಟನೆ ನಡೆದಿರುವುದು ಎಲ್ಲರ ಮನಕಲಕುವಂತಿತ್ತು.


ವಿವೇಕಾನಂದ ಕಾಲೇಜು ಹಾಸ್ಟೆಲ್ನಲ್ಲಿದ್ದುಕೊಂಡು ಅದೇ ವಿವೇಕಾನಂದ ಇಂನಿಜಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಕೆಲವು ವಿದ್ಯಾರ್ಥಿಗಳು ಭಾನುವಾರ ಮಧ್ಯಾಹ್ನ ಬಳಿಕ ಕಾಲೇಜು ಸಮೀಪವಿರುವ ರೈಲ್ವೆ ಹಳಿಯ ಬಳಿಗೆ ಬಂದು ರೈಲು ಸಂಚಾರದ ಛಾಯಾಚಿತ್ರವನ್ನು ಸೆರೆ ಹಿಡಿಯಲು ಮುಂದಾಗಿದ್ದರು ಎನ್ನಲಾಗಿದೆ. ರೈಲ್ವೇ ಹಳಿಯಲ್ಲಿ ನಿಂತುಕೊಂಡು ರೈಲು ಬರುವಿಕೆಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದ ಸಂದರ್ಭದಲ್ಲಿ ಬಂದ ಪ್ಯಾಸೆಂಜರ್ ರೈಲಿನಡಿಗೆ ಬಿದ್ದು ವಿದ್ಯಾರ್ಥಿನಿ ವರ್ಷ ಆಳ್ವ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆಕೆಯ ತಲೆಯ ಭಾಗ ಭಿದ್ರವಾಗಿದೆ. ಆಕೆಯ ಜೊತೆಗಿದ್ದ ಸಹಪಾಠಿ ವಿದ್ಯಾರ್ಥಿನಿ ರಚನಾ ಅವರ ಕೈಯ ಭಾಗಕ್ಕೆ ಗಾಯಗಳಾಗಿದ್ದು, ಆಕೆಯನ್ನು ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಛಾಯಾಚಿತ್ರ ಸೆರೆ ಹಿಡಿಯಲು ಹೋದ ವಿದ್ಯಾರ್ಥಿನಿ ವರ್ಷಾ ಅವರಿಗೆ ರೈಲು ಡಿಕ್ಕಿ ಹೊಡೆಯಿತು ಎನ್ನಲಾಗಿದ್ದರೂ ಛಾಯಾ ಚಿತ್ರ ಸೆರೆ ಹಿಡಿಯಲು ಹೋದವರು ರೈಲಿನಡಿಗೆ ಬೀಳುವುದಾದರೂ ಹೇಗೆ , ಆಕೆಯ ಜೊತೆಗಿದ್ದ ವಿದ್ಯಾರ್ಥಿನಿ ಗಾಯಗೊಳ್ಳಲು ಹೇಗೆ ಸಾಧ್ಯ ಎಂಬ ಅನುಮಾನಗಳು ವ್ಯಕ್ತವಾಗಿದ್ದು, ಈ ಘಟನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಹಾಸ್ಟೆಲ್ ವಿದ್ಯಾರ್ಥಿಗಳಾದ ವರ್ಷಾ ಮತ್ತು ಆಕೆಯ ಸಹಪಾಠಿಗಳಾದ ರಚನಾ, ಸ್ಮಿತಾ,ಶ್ರೇಯಾ, ಪ್ರಿಯಾಂಕ ಮತ್ತು ಸುಖೇಶ್ ಎಂಬವರು ಭಾನುವಾರ ಮಧ್ಯಾಹ್ನ ಬಳಿಕ ಕಾಲೇಜು ಸಮೀಪವಿರುವ ರೈಲ್ವೆ ಸೇತುವೆ ಬಳಿಗೆ ಬಂದು ರೈಲು ಸಂಚಾರದ ಛಾಯಾಚಿತ್ರ ಸೆರೆ ಹಿಡಿಯುವ ಉದ್ದೇಶದಿಂದ ರೈಲಿನ ಬರುವಿಕೆಗಾಗಿ ರೈಲ್ವೇ ಹಳಿಯಲ್ಲಿ ಕುಳಿತುಕೊಂಡು ರೈಲಿಗಾಗಿ ಕಾಯುತ್ತಿದ್ದರು. ರೈಲು ಹಳಿಯಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳು ಹರಟೆ ಹೊಡೆದ ಪರಿಣಾಮವಾಗಿ ರೈಲು ಆಗಮಿಸಿರುವುದು ಅರಿವಿಗೆ ಬಾರದೆ ಈ ಘಟನೆ ಸಂಭವಿಸಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಮೃತ ವಿದ್ಯಾರ್ಥಿನಿ ವರ್ಷ ಆಳ್ವರ ಮೃತದೇಹವನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಇರಿಸಲಾಗಿದ್ದು, ಸುದ್ದಿ ತಿಳಿದು ಮಂಗಳೂರಿನಿಂದ ಆಗಮಿಸಿದ ಆಕೆಯ ಸಂಬಂಧಿಕರು ಕಾಲೇಜು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

