ಕೈಕಂಬ: ಕೊಳಿಯನ್ನು ಓಡಿಸಿಕೊಂಡು ಬಂದ ಚಿರತೆಯೊಂದು ಕಾಜಿಲ ಅಂಗನವಾಡಿ ಬಳಿಯ ಬಾವಿಯೊಂದಕ್ಕೆ ಬಿದ್ದಘಟನೆ ಸೋಮವಾರ ಗಂಜಿಮಠ ಗ್ರಾಮದ ಕಾಜಿಲ ಎಂಬಲ್ಲಿ ನಡೆದಿದೆ. ಕಾಜಿಲದ ಶೇಖರ ಎಂಬವರಿಗೆ ಸೇರಿದ ಬಾವಿ ಇದಾಗಿದ್ದು ಬೆಳಗ್ಗೆ ಕೋಳಿಯೊಂದನ್ನು ಓಡಿಸಿಕೊಂಡು ಬಂದ ಚಿರತೆಯು ಕೋಳಿ ಸಮೇತ ಬಾವಿಗೆ ಬಿದ್ದಿದೆ.
ಸುದ್ದಿ ಹರಡುತ್ತಿದ್ದಂತೆ ಚಿರತೆಯನ್ನು ನೋಡಲು ಸುತ್ತಮುತ್ತಲಿನ ಜನರು ತಂಡೋಪ ತಂಡವಾಗಿ ಬರುತ್ತಿದ್ದರು. ಇದೇ ಚಿರತೆ ನಮ್ಮ ಮನೆಯ ನಾಯಿ ಮತ್ತು ಕೋಳಿಗಳನ್ನು ತಿಂದಿರಬೇಕು ಎಂದು ಮಾತಾಡಿಕೊಳ್ಳುತ್ತಿದ್ದರು. ಬಾವಿಗೆ ಬಿದ್ದ ಚಿರತೆಯನ್ನು ಮೇಲಕ್ಕೆ ತೆಗೆಯಲು ಗ್ರಾ. ಪಂ ಸದಸ್ಯ ಮಾಧವ ಕಾಜಿಲ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಅರಣ್ಯ ಇಲಾಖಾ ಸಿಬಂದಿಗಳು ಸ್ಥಳಕ್ಕೆ ದೌಡಾಯಿಸಿದರು ಸ್ಥಳೀಯರ ಸಹಕಾರದೊಂದಿಗೆ ಕದ್ರಿ ಅಗ್ನಿಶಾಮಕದಳದವರು, ಬಜಪೆ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಕೆ. ಆರ್ ನಾಯಕ್ ಹಾಗೂ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಿ ರಕ್ಷಣಾ ಸಿಬ್ಬಂದಿಗಳಿಗೆ ಕಾರ್ಯಚರಣೆಮಾಡಲು ಅನುವು ಮಾಡಿಕೊಟ್ಟರು.
ಜಿಲ್ಲಾ ಅರಣ್ಯಾಧಿಕಾರಿ ತರಿಕಾಲನ್ ,ಪ್ರಾದೇಶಿಕ ಅರಣ್ಯಾದಿಕಾರಿ ಶ್ರೀಧರ್, ಕೈಕಂಬ ವಲಯ ಅರಣ್ಯಾಧಿಕಾರಿ ಸುಧೀರ್ ಕೊಟ್ಟಾರಿ ಅವರ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. ನಾಲ್ಕು ಗಂಟೆಯ ಶತಪ್ರಯತ್ನದಲ್ಲಿ ಚಿರತೆಯನ್ನು ಏಣಿಯಿಂದ ಮೇಲಕ್ಕೆ ಬರುವಂತೆ ಮಾಡಿ ಭೋನಿನೊಳಗೆ ಕೂಡಿಹಾಕಾಲಾಯಿತು. ಚಿರತೆಯನ್ನು ಮೆಲೆತ್ತಿದ ಬಳಿಕ ವೈದ್ಯಕೀಯ ಪರೀಕ್ಷೆಗೆ ಪಿಲಿಕುಳ ವನ್ಯಜೀವಿ ಕೇಂದ್ರಕ್ಕೆ ರವಾನಿಸಿದ್ದಾರೆ. ಚಿರತೆಯ ಬಂಧನದಿಂದಾಗಿ ಪರಿಸರದ ಜನರಲ್ಲಿದ್ದ ಭೀತಿ ನಿವಾರಣೆಯಾದತಂತಾಗಿದೆ.

