ಬಂಟ್ವಾಳ; ಸ್ವಭಾಷ ಮತ್ತು ಸ್ವಭೂಷ ಇವೆರಡನ್ನು ಪ್ರತಿಯೊಬ್ಬ ಭಾರತೀಯನು ಮೈಗೂಡಿಸಿಕೊಂಡಲ್ಲಿ ಸ್ವದೇಶಿ ಕಲ್ಪನೆಯು ಬೆಳೆಯಲು ಸಾಧ್ಯ. ಗಾಂಧೀಜಿಯವರ ಸರಳತೆ ಮತ್ತು ಸ್ವದೇಶಿ ಕಲ್ಪನೆಯು ಅನುಕರಣೀಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಹೇಳಿದರು.
ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ಪ್ರಭಾಸ ಮಾನವಿಕ ಸಂಘದಿಂದ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯರ ಜನ್ಮದಿನ ಸೆಪ್ಟೆಂಬರ್ 25ರಿಂದ ಆರಂಭವಾಗಿ ಮಹಾತ್ಮ ಗಾಂಧೀಜಿಯವರ ಜನ್ಮದಿನ ಅಕ್ಟೋಬರ್ 2ರವರೆಗೆ ನಡೆದ ಸ್ವದೇಶಿ ಸಪ್ತಾಹದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶ ಕಂಡ ಇನ್ನೋರ್ವ ಧೀಮಂತ ವ್ಯಕ್ತಿ ಲಾಲ್ ಬಹದ್ದೂರು ಶಾಸ್ತ್ರಿ ಇವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷ ವಾಕ್ಯದೊಂದಿಗೆ ರೈತರಿಗೆ ಮತ್ತು ಸೈನಿಕರಿಗೆ ನೈಜ ಪ್ರಾಶಸ್ತ್ಯವನ್ನು ನೀಡಿದವರು ಎಂದರು. ಕಾಲೇಜಿನ ಇತಿಹಾಸ ಉಪನ್ಯಾಸಕರಾದ ಗಂಧರ್ವ ಅವರು ಸ್ವಾಗತಿಸಿ, ಕಾರ್ಯಕ್ರಮದ ವರದಿ ವಾಚಿಸಿದರು. ವೇದಿಕೆಯಲ್ಲಿ ಕನ್ನಡ ಉಪನ್ಯಾಸಕರಾದ ಯತಿರಾಜ್, ಇತಿಹಾಸ ಉಪನ್ಯಾಸಕಿಯಾದ ಶುಭಲತಾ ಉಪಸ್ಥಿತರಿದ್ದರು.ವಿದ್ಯಾರ್ಥಿ ಗಳಾದ ರಿತೇಶ್ ವಂದಿಸಿ ಆಶಾಲತಾ ನಿರೂಪಿಸಿದರು.
