ಗುರುಪುರ : ಗುರುಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೆ. 23ರಂದು ಶಾಸಕ ಡಾ. ಭರತ್ ಶೆಟ್ಟಿಯವರು 24 ಮಂದಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಅನುದಾನವಾಗಿ ಬಂದಿರುವ ಸೈಕಲ್ ವಿತರಿಸಿದರು.
ಸರ್ಕಾರಿ ಶಾಲಾ-ಕಾಲೇಜುಗಳು ಇನ್ನೂ ಅಭಿವೃದ್ಧಿ ಹೊಂದಬೇಕಿದೆ. ಸರ್ಕಾರ ಬಡ ಮಕ್ಕಳ ಶಿಕ್ಷಣಕ್ಕೆ ಸಮವಸ್ತ್ರ, ಸೈಕಲ್ ಮೊದಲಾದ ಸವಲತ್ತು ಒದಗಿಸುತ್ತಿದೆ. ಇವುಗಳ ಸದುಪಯೋಗ ಪಡೆದುಕೊಂಡು, ವಿದ್ಯಾರ್ಥಿಗಳು ಸತ್ಪ್ರಜೆಗಳಾಗಬೇಕು. ಪರಿಸರ ಸ್ವಚ್ಛತೆಯೊಂದಿಗೆ ಪುಸ್ತಕ, ಬಟ್ಟೆಬರೆ ಹಾಗೂ ಈಗ ನೀಡಿರುವ ಸೈಕಲ್ಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬಕು ಎಂದು ಶಾಸಕ ಡಾ. ಶೆಟ್ಟಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡುತ್ತ, ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಸೈಕಲ್ಗಳು ಹೆಚ್ಚು ಪ್ರಯೋಜನವಾಗುತ್ತಿದೆ. ಸವಾರಿ ವೇಳೆ ಎಚ್ಚರ ವಹಿಸಿಕೊಂಡು ಸೈಕಲ್ನ ಸದುಪಯೋಗದೊಂದಿಗೆ ಕಲಿತ ಶಾಲೆಗೆ ಉತ್ತಮ ಹೆಸರು ತರಬೇಕು ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕಾವ ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಬಿಜೆಪಿ ಪದಾಧಿಕಾರಿಗಳಾದ ರಾಜೇಶ್ ಸುವರ್ಣ, ಶ್ರೀಕರ ಶೆಟ್ಟಿ, ಹರೀಶ್ ಬಳ್ಳಿ, ವಸಂತ ಸುವರ್ಣ, ಸೋಮಯ್ಯ ಹಾಗೂ ಸಾದಿಕ್ ಉಪಸ್ಥಿತರಿದ್ದರು. ಶಿಕ್ಷಕಿ ಸಂಧ್ಯಾರಾಣಿ ಕಾರ್ಯಕ್ರಮ ನಿರೂಪಿಸಿದರೆ, ಮುಖ್ಯ ಶಿಕ್ಷಕಿ ರೂಪಾ ಡಿ ಎನ್ ವಂದಿಸಿದರು.



