ಸುದ್ದಿ9 ಕೈಕಂಬ: ಕಳೆದ 4 ದಿನಗಳಿಂದ ಕೈಕಂಬದಲ್ಲಿ ಸುತ್ತಾಡಿಕೊಳ್ಳುತ್ತಿದ್ದ ಭಾರೀ ಗಾತ್ರದ ಜೆರ್ಸಿ ಹಸು ಕಳ್ಳರ ಪಾಲಾಗಿದೆ ಎಂದು ತಿಳಿದುಬಂದಿದೆ. ಕಂದಾವರ ಕೈಕಂಬದ ವ್ಯಕ್ತಿಗೆ ಸೇರಿದ ಹಸು ಇದಾಗಿದ್ದು, ಕೈಕಂಬದಲ್ಲಿ ಸುತ್ತಾಡಿಕೊಳ್ಳುತ್ತಿತ್ತು. ಆದರೆ ಕಳೆದ ರವಿವಾರದಿಂದ ನಾಪತ್ತೆಯಾಗಿದ್ದ ಹಸು ಕಳ್ಳರ ಪಾಲಾಗಿದ್ದು, ಇದರ ಮೌಲ್ಯ ಸುಮಾರು 50 ಸಾವಿರ ರೂ ಎಂದು ಅಂದಾಜಿಸಲಾಗಿದೆ.
ಆದಿತ್ಯವಾರ ತಡರಾತ್ರಿ ಎರಡರ ವೇಳೆಗೆ ಕೈಕಂಬದಲ್ಲಿ ಮಲಗಿದ್ದ ಹಸುವನ್ನು ಪಿಕ್ಅಪ್ ವಾಹನದಲ್ಲಿ ತುಂಬಿಸಿದ್ದು, ಇದರ ಅರಚಿದ ಸದ್ದು ಕೇಳಿದೆ ಎಂದು ಸ್ಥಳೀಯರು ತಿಳಿಸಿದ್ದು, ಆದರೆ ಕೆಲವು ಯುವಕರು ಬರುವ ವೇಳೆಗೆ ಇದನ್ನು ಮಂಗಳೂರಿನ ಕಡೆಗೆ ಸಾಗಿಸಲಾಗಿತ್ತು ಎಂದು ತಿಳಿದುಬಂದಿದೆ. ಬಹಳ ಕಾಲದಿಂದ ದನಕಳ್ಳತನ ಕೃತ್ಯದಲ್ಲಿ ತೊಡಗಿರುವ ಕೆಲವು ಸ್ಥಳೀಯ ದನಕಳ್ಳರ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಕಸಾಯಿಖಾನೆಗೆ ಈ ದನ ರವಾನೆಯಾಗಿದ್ದು, ಮಾಂಸ ಮಾಡಲಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೈಕಂಬ ಆಸುಪಾಸಲ್ಲಿ ನಿಲ್ಲದ ದನಕಳ್ಳತನ:
ಕೈಕಂಬ ಆಸುಪಾಸಲ್ಲಿ ಕಳೆದ ಹಲವಾರು ವರ್ಷಗಳಿಂದ ದನಕಳ್ಳತನ ನಡೆಯುತ್ತಿದ್ದು, ಹಲವರ ಮೇಲೆ ಕೇಸ್ ಆಗಿದೆ. ಅಲ್ಲದೆ ಹಸುಕಳ್ಳತನದಿಂದ ಆಕ್ರೋಶಿತರಾಗಿದ್ದ ಕೆಲವು ಸಂಘಟನೆಯ ಯುವಕರು ಹಸುಕಳ್ಳರ ಮೇಲೆ ದಾಳಿ ನಡೆಸಿದ ಪರಿಣಾಮ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ಹಸುಗಳಗ್ಳರ ಹಾವಳಿ ತೀವ್ರವಾಗಿದ್ದು, ಎಗ್ಗಿಲ್ಲದೆ ದನಗಳ ರವಾನೆಯಾಗುತ್ತಿದೆ. ಆದರೆ ಪೊಲೀಸರಿಗೆ ಮಾಮೂಲಿ ಹೋಗುತ್ತಿರುವ ಕಾರಣ ಅವರು ನಿಷ್ಕ್ರಿಯರಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

