ಬಂಟ್ವಾಳ: ಶುಕ್ರವಾರದಂದು ವಿಟ್ಲ ಸಹಿತ ತಾಲೂಕಿನ ಹಲವೆಡೆಗಳಲ್ಲಿ ಬಿಸಿಲಿನ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಿವೆ. ಗುರುವಾರ ರಾತ್ರಿಯಿಂದೀಚೆಗೆ ಸುರಿದ ಮಳೆಯ ಅನಾಹುತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅಲ್ಲಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿರುವ ಅವಘಡಗಳು ಸಂಭವಿಸಿದೆ.ಗುರುವಾರ ರಾತ್ರಿ ಸುರಿದ ಮಳೆಗೆ ಮಂಚಿ ಗ್ರಾಮದ ಬೀಡಿಸಾಲು ನಿವಾಸಿ ಮೋನಪ್ಪ ಎಂಬವರ ಮನೆ ಸಂಪುರ್ಣ ಕುಸಿತಗೊಂಡು ನಷ್ಟ ಸಂಭವಿಸಿದೆ. ಇಡ್ಕಿದು ಗ್ರಾಮದ ಅಳಕೆ ಮಜಲು ನಿವಾಸಿ ಜಯಂತಿ ಎಂಬವರ ಮನೆ ಭಾಗಶಃ ಹಾನಿ, ಬಿಕಸ್ಬಾ ಗ್ರಾಮದ ಇಬ್ರಾಹಿಂ ಅವರ ಮನೆ ಭಾಗಶಃ ಹಾನಿಯಾಗಿದೆ.
ಅದೇ ರೀತಿ ಅನಂತಾಡಿ ಗ್ರಾಮದ ಮಂಜಲಹಿತ್ಲು ನಿವಾಸಿ ದೇರಣ್ಣ ಪೂಜಾರಿ ಎಂಬವರು ಆಕಸ್ಮಿಕವಾಗಿ ಜಾರಿ ತೋಡಿನಲ್ಲಿ ಬಿದ್ದು ಮೃತಪಟ್ಟಿದ್ದಾರೆಂದು ಪ್ರಾಥಮಿಕ ವರದಿ ಬಂದಿದ್ದು, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಅಂತಿಮ ವರದಿ ಬಳಿಕ ನೀರ್ಮಾಣ ಕೈಗೊಳ್ಳಲಾಗುವುದು ಎಂದು ಬಂಟ್ವಾಳ ತಾಲೂಕು ವಿಪತ್ತು ನಿರ್ವಹಣಾ ಅಧಿಕಾರಿಗಳು ಕಚೇರಿಯ ವರದಿ ತಿಳಿಸಿದೆ.
