ಬಂಟ್ವಾಳ, : ತಾಲೂಕಿನಲ್ಲಿ ನಿರ್ಮಾಣದ ಹಂತದಲ್ಲಿರುವ ಪಂಜೆ ಮಂಗೇಶರಾಯ ಸ್ಮಾರಕ ಭವನ ಹಾಗೂ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ಪರಿಶೀಲಿಸಿದರು.

ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಎರಡೂ ಕಾಮಗಾರಿಗಳ ವಿನ್ಯಾಸ ಬಗ್ಗೆ ವಿವರ ಪಡೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಂಜೆ ಮಂಗೇಶರಾಯರು ಒರ್ವ ಶ್ರೇಷ್ಠ ಕವಿ, ನಮ್ಮ ಬಂಟ್ವಾಳ ತಾಲೂಕಿನಲ್ಲಿಯೇ ಜನಿಸಿರುವ ಅವರು, ಬಂಟ್ವಾಳ ಪೇಟೆಯ ಸಮೀಪವೇ ಪಂಜೆ ಮಂಗೇಶರಾಯರ ಹುಟ್ಟಿದ ಸ್ಥಳವಾದ ಹಿನ್ನೆಲೆಯಲ್ಲಿ ಇದರ ಪಕ್ಕದಲ್ಲೇ ಅವರ ಸ್ಮಾರಕ ಭವನವನ್ನು ನಿರ್ಮಾಣ ಮಾಡಬೇಕೆಂಬ ಕನಸು ನನ್ನದಾಗಿತ್ತು. ಅದಲ್ಲದೆ, ಅವರ ಮನೆಯ ಪಕ್ಕದಲ್ಲಿಯೇ ಸ್ಮಾರಕ ಭವನ ನಿರ್ಮಾಣವಾದರೆ ಒಂದು ಅರ್ಥ ಬರುತ್ತದೆ ಎಂದರು.

ಪಂಜೆ ಮಂಗೇಶರಾಯ ಸ್ಮಾರಕ ಭವನ ನಿರ್ಮಾಣ ಕಾರ್ಯವು ಸುಮಾರು ೮ ಕೋಟಿ ರೂ. ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ೫ ಕೋಟಿ ರೂ. ಮಂಜೂರಾತಿಯಾಗಿದ್ದು, ಹೆಚ್ಚುವರಿ ೩ ಕೋಟಿ ರೂ. ಬಿಡುಗಡೆ ಸಚಿವರಿಗೆ ಮನವಿ ಮೂಲಕ ಒತ್ತಾಯಿಸಲಾಗಿದ್ದು, ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಕೂಡಾ ನೀಡಿದ್ದಾರೆ. ಈ ಸ್ಮಾರಕ ಭವನದಲ್ಲಿ ಮ್ಯೂಸಿಂ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಂಟ್ವಾಳವನ್ನು ಸಾಕಷ್ಟು ಅಭಿವೃದ್ಧಿಗೊಳಿಸಲು ಸಿದ್ದರಾಮಯ್ಯ ನೇತೃತ್ವ ಸರಕಾರವು ಸಾಕಷ್ಟು ಅವಕಾಶ ಕಲ್ಪಿಸಿದೆ. ಮೂರು ಕೋಟಿ ವೆಚ್ಚದಲ್ಲಿ ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಸಮೀಪದಲ್ಲಿಯೇ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನವು ತನ್ನ ಆಡಳಿತಾವಧಿಯಲ್ಲಿ ಮಂಜೂರುಗೊಂಡ ಯೋಜನೆಯಾಗಿದೆ. ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ಮಾಡುವ ಮುಖ್ಯ ರಂಗ ಮಂದಿರವಾಗಿ ಹಾಗೂ ಈ ಭವನದ ಮೇಲಂತಸ್ತಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೌಸಿಂಗ್ ಬೋಡ್೯ನ ಸಹಾಯಕ ಇಂಜಿನಿಯರ್ ಅನಿಲ್ ಜಿ., ಕಿರಿಯ ಸಹಾಯಕಿ ಇಂಜಿನಿಯರ್ ಸಹನಾ, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಮಂಜುಳಾ ಮಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಎಂ.ಬಂಗೇರ, ಪಕ್ಷದ ಪ್ರಮುಖರಾದ ಚಿತ್ತರಂಜನ್ ಬೊಂಡಾಲ, ಪ್ರವೀಣ್ ಕಿಣಿ, ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್,ವೆಂಕಪ್ಪ ಪೂಜಾರಿ ಮೊದಲಾದವರಿದ್ದರು.
