ಬಂಟ್ವಾಳ:ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಮತ್ತು ನಗರ ಪೊಲೀಸ್ ಠಾಣೆ ಮಧ್ಯೆ ಇರುವ ತಾಲ್ಲೂಕು ಪಂಚಾಯಿತಿ ವಾಣಿಜ್ಯ ಮಳಿಗೆ ಪ್ರಥಮ ಮಹಡಿಯಲ್ಲಿ ಹೋಟೆಲ್ ಮತ್ತು ಸೆಲೂನ್ ಸೇರಿದಂತೆ ನಾಲ್ಕು ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಈ ಕಟ್ಟಡದಲ್ಲಿರುವ ರಾಜೇಶ ಬಂಗೇರ ಎಂಬವರ ‘ಸಪ್ತಾಕ್ಷರಿ ಹೇರ್ ಡ್ರೆಸರ್ಸ್’ ಸೆಲೂನಿನ ಶೆಟರ್ ಬಾಗಿಲನ್ನು ಕಬ್ಬಿಣದ ಸಲಾಖೆಯಿಂದ ಒಂದು ಬದಿ ಮೇಲೆತ್ತಿ ಒಳಗೆ ಪ್ರವೇಸಿಸಿದ್ದಾರೆ. ಸೆಲೂನಿನ ಮೇಜಿನಲ್ಲಿ ಇಟ್ಟಿದ್ದ ರೂ 19ಸಾವಿರ ಮೊತ್ತದ ಬಾಡಿಗೆ ಹಣ ಎಗರಿಸಿ ಪರಾರಿಯಾಗಿದ್ದಾರೆ. ಇದಕ್ಕೆ ತಾಗಿಕೊಂಡಂತೆ ಇರುವ ಶೇಖರ ಶೆಟ್ಟಿ ಅಮ್ಟಾಡಿ ಇವರ ಕದಂಬ ಹೋಟೆಲಿಗೆ ನುಗ್ಗಲು ವಿಫಲ ಯತ್ನ ನಡೆಸಿದ್ದು, ಅಲ್ಯೂಮೀನಿಯಂ ಮತ್ತು ಫೈಬರ್ ಫ್ಯಾಬ್ರಿಕೇಶನ್ ಹಾನಿಗೊಳಿಸಿದ್ದಾರೆ. ಈ ಹೋಟೆಲ್ ಪಕ್ಕದಲ್ಲಿರುವ ಸಂದೀಪ್ ಶೆಟ್ಟಿ ಅವರ ‘ಶ್ರೀದೇವಿ ಬಿಲ್ಡರ್ಸ್’ ಕಚೇರಿ ಗಾಜು ಪುಡಿಗೊಳಿಸಿದ್ದು, ಇದೇ ಮಹಡಿಯಲ್ಲಿರುವ ಶರಣ್ ಎಂಬವರ ‘ಹಿಂದೂಸ್ತಾನ್ ಸೇಲ್ಸ್’ ಕಚೇರಿಗೂ ನುಗ್ಗಲು ವಿಫಲಯತ್ನ ನಡೆಸಿದ್ದಾರೆ. ಇದೇ ವೇಳೆ ಅಂಗಡಿ ಮತ್ತು ಕಚೇರಿ ಕಡತಗಳನ್ನು ಚೆಲ್ಲಾಪಿಲ್ಲಿಗೊಳಿಸಿ ಬಾಗಿಲು ಮತ್ತು ಪೀಠೋಪಕರಣಗಳಿಗೂ ಹಾನಿ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣೆಗೆ ಶುಕ್ರವಾರ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಅಂಗಡಿಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಸಲಹೆ ನಿಡಿದ್ದಾರೆ.
ಈ ವಾಣಿಜ್ಯ ಸಂಕೀರ್ಣ ನಗರ ಪೊಲೀಸ್ ಠಾಣೆಗೆ ಸುಮಾರು 50 ಮೀ.ಅಂತರದಲ್ಲಿದ್ದು, ಕಳೆದ ಒಂದು ತಿಂಗಳ ಹಿಂದೆಯಷ್ಟೇ ಈ ಕಟ್ಟಡದ ಎದುರು ಭಾಗದ ಶ್ರೀನಿವಾಸ್ ಆರ್ಕೇಡ್ ಕಟ್ಟಡದಲ್ಲಿಯೂ ಕಳ್ಳನೊಬ್ಬ ವಕೀಲರ ಕಚೇರಿ ಬಾಗಿಲು ತೆರೆದು ಕಳವಿಗೆ ವಿಫಲಯತ್ನ ನಡೆಸಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಕೆಲವು ದಿನಗಳ ಹಿಂದೆಯಷ್ಟೇ ಇಲ್ಲಿನ ವೈನ್‍ಶಾಪ್ ಬಳಿ ಕಳವಿಗೆ ವಿಫಲ ಯತ್ನ ನಡೆಸಿದ್ದರೆ, ಕೆಲವೊಂದು ಅಂಗಡಿಗಳಿಗೆ ಬೈಕಿನಲ್ಲಿ ತಂಡವೊಂದು ಬಂದು ದುಬಾರಿ ಮೊತ್ತದ ಸಿಗರೇಟು ಪೊಟ್ಟಣ ಪಡೆದು ಬಳಿಕ ಪರಾರಿಯಾದ ಪ್ರಕರಣವೂ ನಡೆದಿದೆ. ಇದರಿಂದಾಗಿ ನಾಗರಿಕರಲ್ಲಿ ಆತಂಕ ಉಂಟು ಮಾಡಿದೆ ಎಂದು ಇಲ್ಲಿನ ವರ್ತಕರು ಅಳಲು ತೋಡಿಕೊಂಡಿದ್ದಾರೆ.
