ಬಂಟ್ವಾಳ: ಗ್ರಾಮದ ಕಡೆ ಶಾಸಕರ ನಡೆ ಎಂಬ ಘೋಷವಾಕ್ಯದೊಂದಿಗೆ ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ “ಗ್ರಾಮ ಸ್ಪಂದನ” ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಇದರ ಮೊದಲ ಭಾಗವಾಗಿ ಜೂನ್ 28ರಂದು ನಡೆಯುವ ಗ್ರಾಮ ಸ್ಪಂದನ ಕಾರ್ಯಕ್ರಮಕ್ಕೆ ಎರಡು ಗ್ರಾಮಗಳನ್ನು ಶಾಸಕರು ಆಯ್ದುಕೊಂಡಿದ್ದಾರೆ.
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಮಂಚಿ ಮತ್ತು ಮಧ್ಯಾಹ್ನದ ಬಳಿಕ ಅಮ್ಟಾಡಿ ಗ್ರಾಮ ಪಂಚಾಯತ್ ನಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆ ಮತ್ತು ಪಂಚಾಯತ್ಸಭಾಂಗಣದಲ್ಲಿ ಸಾರ್ವಜನಿಕರ ಭೇಟಿಯನ್ನು ಮಾಡಿ ಅವರ ಅಹವಾಲು ಸ್ವೀಕರಿಸಲಿದ್ದಾರೆ. ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರುಮತ್ತು ವಿವಿಧ ಸ್ತರದ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಮದಲ್ಲಾಗಿರುವ ಅಭಿವೃದ್ದಿ ಕಾಮಗಾರಿಗಳ ಪ್ರಗತಿ ಪರಿಶೀಲಿಸುವುದರ ಜೊತೆಗೆ ಕಾಮಗಾರಿಗಳಿಗೆ ವೇಗ ನೀಡಲು ಕ್ರಮ ಕೈಗೊಳ್ಳುವುದು,ಅಗಬೇಕಾದ ಕಾಮಗಾರಿಗಳ ಕುರಿತಾಗಿ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಈ ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದ್ದು, ವಾರದ ಎರಡು ದಿನ ಈ ಕಾರ್ಯಕ್ರಮ ನಡೆಸಲು ಶಾಸಕರು ಉದ್ದೇಶಿಸಿದ್ದಾರೆ.

