ಗಂಜಿಮಠದ `ಶ್ರೀ ವಿಜಯ ವಾಹಿನಿ’ ವತಿಯಿಂದ 15ನೇ ವರ್ಷದ ಉಚಿತ ಬರೆಯುವ ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮ ಜೂನ್ 22ರಂದು ಮಳಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ.
ಈ ವೇಳೆ ಮಳಲಿಯ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಡಗ ಉಳಿಪಾಡಿ, ತೆಂಕ ಉಳಿಪಾಡಿ, ಮೊಗರು ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಿಸಲಾಗುವುದು.
ಮೊಗರು ಕುಕ್ಕಟ್ಟೆಯ ಖಾಸಗಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಗಂಗಮ್ಮ, ಗುರುಕಂಬಳ ಎಕೆಯು ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಹಾಗೂ ಮಳಲಿಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿಯಲ್ಲಿ 1018-19ರ ಸಾಲಿನಲ್ಲಿ ಶೇ 99 ಫಲಿತಾಂಶ ತಂದುಕೊಟ್ಟ ಎಲ್ಲ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಸನ್ಮಾನ ಏರ್ಪಡಿಸಲಾಗಿದೆ.
ಜೂನ್ 15ರಂದು ಕುಕ್ಕಟ್ಟೆ ಶಾಲೆಯಲ್ಲಿ ಶ್ರೀ ವಿಜಯ ವಾಹಿನಿ ಅಧ್ಯಕ್ಷ, ತಾಪಂ ಸದಸ್ಯ ಜಿ ಸುನಿಲ್ ಮುಂದಾಳತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮೊಗರು ಹಾಗೂ ಸೂರಲ್ಪಾಡಿ ಪ್ರಾಥಮಿಕ ಶಾಲೆಯ ಒಂದರಿಂದ ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ಹಾಗೂ ಲೇಖನಿ ಸಾಮಗ್ರಿ ವಿತರಿಸಲಾಗಿತ್ತು. ಜೂನ್ 22ರಂದು ನಡೆಯಲಿರುವ ಸಮಾರೋಪದಲ್ಲಿ ಎಂಎಲ್‍ಸಿ ಐವನ್ ಡಿ’ಸೋಜ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಮೊೈದಿನ್ ಬಾವಾ, ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಯುವ ನಾಯಕ ಮಿಥುನ್ ರೈ ಹಾಗೂ ಸ್ಥಳೀಯ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
