ಬಂಟ್ವಾಳ: ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಬಂಟ್ವಾಳ ಇದರ ಆಶ್ರಯದಲ್ಲಿ ಸಿಂಡಿಕೇಟ್ ಮತ್ತು ಕರ್ಣಾಟಕ ಬ್ಯಾಂಕ್ ಗಳ ಸಹಯೋಗದೊಂದಿಗೆ ರಿಸವ್೯ ಬ್ಯಾಂಕ್ ನ ಆದೇಶದನ್ವಯ ರೈತರಿಗೆ ಬ್ಯಾಂಕ್ ಗಳಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡುವ ಆರ್ಥಿಕ ಸಾಕ್ಷರತಾ ಸಪ್ತಾಹ ಬಿ.ಸಿ.ರೋಡಿನ ಬ್ರಾಹ್ಮಣ ಪರಿಷತ್ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾ ರೈತಸಂಘ ಹಸಿರು ಸೇನೆಯ ಕಾರ್ಯದರ್ಶಿ ಮನೋಹರ ಶೆಟ್ಟಿ ಸಪ್ತಾಹವನ್ನು ಉದ್ಘಾಟಿಸಿ ಗ್ರಾಮ,ಹೋಬಳಿ ,ತಾಲೂಕು ಮಟ್ಟದಲ್ಲೂ ರೈತರ ಕುಂದುಕೊರತೆಯನ್ನು ಆಲಿಸುವ ಸಭೆಯನ್ನು ಜಿಲ್ಲಾಡಳಿತ ನಡೆಸಬೇಕು ಎಂದು ಆಗ್ರಹಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಸುಬ್ರಹ್ಮಣ್ಯ ಭಟ್ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಯೋಜನೆಯ ಬಗ್ಗೆ ರೈತ ಮಾತ್ರವಲ್ಲ ದೇಶದ ಪ್ರತಿಯೊಬ್ಬ ನಾಗರಿಕನು ಅರಿತುಕೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು,ಪಿ.ಎಂ.ಎಫ್.ಬಿ.ವೈ ಯ ಮೂಲಕ ಪ್ರಾಕೃತಿಕ ವಿಕೋಪದಿಂದಾಗುವ ನಷ್ಟಕ್ಕೆ ಪರಿಹಾರ ಪಡೆಯಲು ಜೂ.30 ರ ವರೆಗೆ ಅವಕಾಶವಿದ್ದು,ರೈತರು ಅರ್ಜಿಸಲ್ಲಿಸುವಂತೆ ಕೋರಿದರು. ನಿವೃತ್ತ ಬ್ಯಾಂಕ್ ಅಧಿಕಾರಿ ಜಯಂತ ಶೆಟ್ಟಿ ಅವರು ಬ್ಯಾಂಕ್ ಮೂಲಕ ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಿಧ ವಿಮಾ ಸೌಲಭ್ಯದ ಮಾಹಿತಿ ನೀಡಿದರು.ಬಂಟ್ವಾಳ ಸಿಂಡಿಕೇಟ್ ಬ್ಯಾಂಕ್ ನ ಮನೇಜರ್ ಆಶೀರ್ವಾದ್ ರೈತರ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿದರು.ರೈತ ಮುಖಂಡರಾದ ಬಿ.ಕೆ.ಇದ್ದಿನಬ್ಬ,ಸುದೇಶ್ ಮಯ್ಯ,ವಿಟ್ಲ ಗೋವಿಂದ ಭಟ್,ರಾಬಟ್೯ ಡಿಸೋಜ ಮೊದಲಾದವರಿದ್ದರು.
