ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ-ಪೂಂಜ ರಸ್ತೆ ನಡುವಿನ ಉಪ್ಪಿರ ಎಂಬಲ್ಲಿ ಕಳೆದ ಒಂದು ತಿಂಗಳಿನಿಂದ ಸುಮಾರು 50 ಮನೆಗಳಿಗೆ ಪಿಕಪ್ ವಾಹನದಲ್ಲಿ ಟ್ಯಾಂಕ್ ಮೂಲಕ ತಂದು ಉಚಿತ ಕುಡಿಯುವ ನೀರು ಪೂರೈಸುವ ಮೂಲಕ ಉದ್ಯಮಿಯೊಬ್ಬರು ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಲ್ಲಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲಿಯನಡುಗೋಡು ಗ್ರಾಮದಲ್ಲಿ ಸುಮಾರು 100 ಮನೆಗಳಿಗೆ ಎರಡು ಕೊಳವೆ ಬಾವಿಗಳ ಮೂಲಕ 1ಲಕ್ಷ ಲೀ.ಸಾಮಥ್ರ್ಯದ ಟ್ಯಾಂಕಿನಿಂದ ಪ್ರತೀ ವರ್ಷ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈ ಬಾರಿ ಎರಡೂ ಕೊಳವೆ ಬಾವಿ ಕೂಡಾ ಬತ್ತಿ ಹೋದ ಹಿನ್ನೆಲೆಯಲ್ಲಿ ಶೇ.75ರಷ್ಟು ಮನೆಗಳಿಗೆ ಕುಡಿಯುವ ನೀರಿಗೆ ಬರ ಎದುರಾಗಿದೆ.

4btl-Uppira ಇಲ್ಲಿನ ಉಪ್ಪಿರ, ಶಾಲಾ ಬಳಿ, ಮಂಚಕಲ್ಲು ಮತ್ತಿತರ ಬಹುತೇಕ ಕೂಲಿ ಕಾರ್ಮಿಕರು ವಾಸಿಸುತ್ತಿರುವ ಕಾಲೊನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ದೂರದ ಕೃಷಿಕರ ತೋಟ ಮತ್ತಿತರ ಕಡೆಗಳಿಗೆ ತೆರಳಿ ನೀರು ತರಬೇಕಾಗಿತ್ತು.
ಈ ಬಗ್ಗೆ ವಿಷಯ ತಿಳಿದ ಇಲ್ಲಿನ ಹೊಕ್ಕಾಡಿಗೋಳಿ ಉದ್ಯಮಿ ರಾಘವೇಂದ್ರ ಭಟ್ ಅವರು ತನ್ನ ಪಿಕಪ್ ವಾಹನದಲ್ಲಿ ಒಂದೂವರೆ ಸಾವಿರ ಲೀ.ಸಾಮಥ್ರ್ಯದ ಟ್ಯಾಂಕಿನಲ್ಲಿ ನೀರು ತುಂಬಿಕೊಂಡು ಸ್ವತಃ ಅಲ್ಲಿಗೆ ತೆರಳಿ ಉಚಿತ ನೀರು ಪೂರೈಕೆ ಮಾಡುತ್ತಿದ್ದಾರೆ.

4btl-Tank

ಡಿಪ್ಲೋಮಾ ಪದವೀಧರರಾಗಿರುವ ಭಟ್ಟರು ಫಿನೋಲೆಕ್ಸ್ ಪೈಪ್ ಡೀಲರ್ ಉದ್ಯಮ ನಡೆಸುತ್ತಿದ್ದು, ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡು ಸ್ಥಳೀಯ ಹೊಕ್ಕಾಡಿಗೋಳಿ ಕಂಬಳ ಸಮಿತಿಯಲ್ಲಿ ಸಕ್ರಿರಾಗಿದ್ದಾರೆ. ಇವರು ತನ್ನ ಮನೆ ಮತ್ತು ಅಡಿಕೆ ತೋಟಕ್ಕಾಗಿ ಕಳೆದ ಕೆಲವು ವರ್ಷಗಳ ಹಿಂದೆ 900 ಅಡಿ ಆಳಕ್ಕೆ ಕೊರೆದ ಕೊಳವೆ ಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿದೆ. ಇದೀಗ ತನ್ನ ಉದ್ಯಮ ಮತ್ತಿತರ ಕ್ರಿಯಾಶೀಲ ಚಟುವಟಿಕೆ ನಡುವೆಯೂ ಕಳೆದ ಒಂದು ತಿಂಗಳಿನಿಂದ ದಿನವೊಂದಕ್ಕೆ ಮೂರ್ನಾಲ್ಕು ಬಾರಿ ಸುಮಾರು 5ಸಾವಿರ ಲೀಟರಿನಷ್ಟು ಉಚಿತ ನೀರು ಪೂರೈಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಇವರು ಸ್ವತಃ ಬಂದು ಕುಡಿಯುವ ನೀರು ಪೂರೈಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ವಯೋವೃದ್ಧರು ನಿಮಗೆ ದೇವರು ಒಳಿತು ಮಾಡಲಿ ಎನ್ನುತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿಯೂ ಹರಿದಾಡುವ ಮೂಲಕ ಭಾರೀ ಗಮನ ಸೆಳೆದಿದೆ.

4btl-Raghavendra Bhat
ನಾವು ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ನೆಲೆಸಿದ್ದು, ಇದೇ ಪ್ರಥಮ ಬಾರಿಗೆ ಇಲ್ಲಿ ನೀರಿಗೆ ಬರಗಾಲ ಉಂಟಾಗಿದೆ. ಇದೀಗ ಸ್ನಾನ ಮತ್ತು ಕುಡಿಯುವ ನೀರು ಪೂರೈಸುವ ಮೂಲಕ ಭಟ್ಟರು ನಮಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಬಟ್ಟೆ ತೊಳೆಯುವುದಕ್ಕಾಗಿ ನಾವು ಪುಚ್ಚಮೊಗರು ಫಲ್ಗುಣಿ ಹೊಳೆಗೆ ಹೋಗುತ್ತಿದ್ದು, ಅಲ್ಲಿಯೂ ನೀರು ಬತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ತನ್ನ ಸಮವಸ್ತ್ರ ಶುಭ್ರವಾಗಿಡುವುದಕ್ಕೂ ಅಸಾಧ್ಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ನಮಗೆ ಶಾಶ್ವತ ಪರಿಹಾರ ದೊರಕಿಸಿಕೊಡಬೇಕು ಎಂದು ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.
ಅಭಿಪ್ರಾಯ:
ಜಿಲ್ಲೆಯಲ್ಲಿ ನೇತ್ರಾವತಿ ನದಿ ತಿರುವು ಬಗ್ಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೈಗೊಂಡ ಅವೈಜ್ಞಾನಿಕ ನಿಲುವು ಒಂದೆಡೆಯಾದರೆ ಇನ್ನೊಂದೆಡೆ ರೈತರಿಗೆ ಉಚಿತ ವಿದ್ಯುತ್ ಸಿಕ್ಕಿದ ಪರಿಣಾಮ ಬಹುತೇಕ ಎಲ್ಲಾ ರೈತರು ತಮ್ಮ ಕೊಳವೆ ಬಾವಿಗೆ ಅಳವಡಿಸಿದ ಪಂಪ್ ರಾತ್ರಿ -ಹಗಲು ಚಾಲನೆಯಲ್ಲಿಟ್ಟಿರುವುದು ನೀರಿನ ಸಮಸ್ಯೆಗೆ ಪ್ರಮುಖ ಕಾರಣ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.- ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ
ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ನಾಗರಿಕರಿಗೆ ಉಚಿತ ನೀರು ಪೂರೈಸಲು ವಿದ್ಯುತ್ ಕೈಕೊಟ್ಟಾಗ ರಾಘವೇಂದ್ರ ಭಟ್ಟರು ತನ್ನ ಮನೆಯ ಟ್ಯಾಂಕಿನ ನೀರನ್ನೂ ವಿತರಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಲ್ಲಿ ದಿನಕ್ಕೆ ಮೂರ್ನಾಲ್ಕು ಬಾರಿ ನೀರು ಪೂರೈಸಲು ಅವರ ಪಿಕಪ್ ವಾಹನಕ್ಕೆ ಸಾವಿರಾರು ರೂಪಾಯಿ ಮೊತ್ತದ ಡಿಸೇಲ್ ಖರ್ಚನ್ನು ಕೂಡಾ ಸ್ವತಃ ಅವರೇ ಭರಿಸಿದ್ದಾರೆ. -ಯಶೋಧರ ಶೆಟ್ಟಿ ಪಂಪ್ ಅಪರೇಟರ್

By suddi9

Leave a Reply

Your email address will not be published. Required fields are marked *