ಪೊಳಲಿ : ಮಳಲಿ-ಪೊಳಲಿ ಮಧ್ಯೆ ನೀರಾವರಿ, ತೋಟಗಾರಿಕೆಯೊಂದಿಗೆ ಸುತ್ತಲ ಗ್ರಾಮಗಳಿಗೆ ನೀರು ಒದಗಿಸಲು ನಿರ್ಮಿಸಲಾಗುತ್ತಿರುವ ಕಿಂಡಿ ಅಣೆಕಟ್ಟು ಕಾಮಗಾರಿ ಈಗಾಗಲೇ ಶೇ 50ರಷ್ಟು ಮುಗಿದಿದೆ. ಸಣ್ಣ ನೀರಾವರಿ ಇಲಾಖೆಯ ಈ ಪ್ರಾಜೆಕ್ಟಿನಲ್ಲಿ ಪೊಳಲಿ-ಮಳಲಿ ಮಧ್ಯೆ ಕಿಂಡಿ ಅಣೆಕಟ್ಟು ಮೇಲ್ಗಡೆ ರಸ್ತೆ ನಿರ್ಮಾಣವೂ ಒಳಗೊಂಡಿದೆ.
ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿರುವ ಸುಮಾರು 12.50 ಕೋಟಿ ರೂ ವೆಚ್ಚದ ಈ ಕಾಮಗಾರಿ ಹಿಂದೆ ಮಾಜಿ ಸಚಿವ ರಮಾನಾಥ ರೈಯ ಶ್ರಮವಿದೆ. ಇಲ್ಲಿ ಮೂರು ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಈಗ ಶೇ 50ರಷ್ಟು ಕಾಮಗಾರಿ ಮುಗಿದಿದೆ. ಒಟ್ಟು 176.6 ಮೀಟರ್ ಉದ್ದದ ಕಿಂಡಿ ಅಣೆಕಟ್ಟಿನ ಅಗಲ 10 ಮೀಟರ್ ಆಗಿದೆ. ಇದರಲ್ಲಿ ಒಟ್ಟು 23 ಕಿಂಡಿಗಳ ನಿರ್ಮಾಣವಾಗಲಿದ್ದು, ಅಣೆಕಟ್ಟು ಎಂಟೂವರೆ ಅಡಿ ಎತ್ತರಕ್ಕೇರಲಿದೆ. ಮುಂದಿನ ಎಪ್ರಿಲಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಾದ ಕುಂದಾಪುರದ ಜಯಶೀಲ ಎನ್ ಶೆಟ್ಟಿ ಪ್ರಯತ್ನ ಮುಂದುವರಿಸಿದ್ದಾರೆ.
ಮಳೆ ಬೀಳುವವರೆಗೆ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಈ ಅಣೆಕಟ್ಟು ಕಾಮಗಾರಿ ಮುಂದುವರಿಯಲಿದೆ. ಬಳಿಕ ಅಕ್ಟೋಬರಿನಿಂದ ಪುನಾ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಸ್ಥಳದಲ್ಲಿದ್ದ ಇಂಜಿನಿಯರುಗಳಾದ ಪ್ರಿನ್ಸ್ ಮತ್ತು ಅಭಿ ಕುಂದಾಪುರ ಹೇಳಿದ್ದಾರೆ.
ಅಣೆಕಟ್ಟಲ್ಲಿ ರಸ್ತೆ :
ವರ್ಷಗಳ ಹಿಂದಿನಿಂದಲೂ ಪೊಳಲಿ ಸಮೀಪ ಫಲ್ಗುಣಿ ನದಿಯ ಎರಡು ಪಾಶ್ರ್ವಗಳಿಗೆ ಹೊಂದಿಕೊಂಡಿರುವ ಗಂಜಿಮಠ ಮತ್ತು ಕರಿಯಂಗಳ ಗ್ರಾಮ ಪಂಚಾಯತ್ ನಿವಾಸಿಗರು ಮಳಲಿ-ಪೊಳಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬೇಡಿಕೆ ಇಟ್ಟಿದ್ದು, ಅದು ಈ ಕಿಂಡಿ ಅಣೆಕಟ್ಟಿನ ಮೇಲ್ಭಾಗದ ರಸ್ತೆ ಮೂಲಕ ಕಾರ್ಯಗತಗೊಳ್ಳಲಿದೆ. ಕಿಂಡಿ ಅಣೆಕಟ್ಟು ರಸ್ತೆ ನಿರ್ಮಾಣಗೊಂಡ ಬಳಿಕ ಈ ಭಾಗದ ಗ್ರಾಮವಾಸಿಗಳ ಪ್ರಯಾಣ ಅಂತರ ಒಂದು ಕಿಮೀ ಕಡಿಮೆಯಾಗಲಿದೆ. ಸದ್ಯ ಸುತ್ತುಬಳಸಿ ಪ್ರಯಾಣಿಸಬೇಕಿದೆ.
“ಪೊಳಲಿ ಭಾಗದಲ್ಲಿ ಇದೊಂದು ಮಹತ್ವದ ಯೋಜನೆಯಾಗಿದೆ. ಕಿಂಡಿ ಅಣೆಕಟ್ಟು ನಿರ್ಮಾಣದ ಬಳಿಕ ಎರಡು ಕಡೆಯ ಜನರಿಗೆ ರಸ್ತೆ ಸೌಕರ್ಯ ಲಭ್ಯವಾಗಲಿದೆ. ಅಲ್ಲ ಅಗತ್ಯಗಳಿಗೆ ಸಂಬಂಧಿಸಿದಂತೆ ನೀರಿನ ಅಭಾವವೂ ಕಡಿಮೆಯಾಗಲಿದೆ. ಎಪ್ರಿಲಿನಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಕಾಮಗಾರಿ ನಡೆಸಲಾಗುತ್ತಿದೆ” ಎಂದು ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಗೋಕುಲದಾಸ್ ಹೇಳಿದರು.

By Suddi9

Leave a Reply

Your email address will not be published. Required fields are marked *