ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಮೇಲೆ ವಿಶ್ವಾಸವನ್ನು ದೇಶದ ಜನ ಇಟ್ಟಿದ್ದು, ಇಂದಿನ ಫಲಿತಾಂಶದಿಂದ ವ್ಯಕ್ತವಾಗುತ್ತಿದೆ. ರಾಜ್ಯದಲ್ಲೂ ಬಿಜೆಪಿ 25 ಸ್ಥಾನ ಗಳಿಸುವ ಮೂಲಕ ರಾಜ್ಯ ಸರಕಾರದ ನೀತಿಯನ್ನು ವಿರೋಧಿಸಿರುವುದು ಕಂಡುಬಂದಿದ್ದು, ಬಿಜೆಪಿ ಪರ ಜನರಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಗುರುವಾರ ಬಿ.ಸಿ.ರೋಡಿನ ಬಿ.ಜೆ.ಪಿ. ಕಚೇರಿಯಲ್ಲಿ ಹಾಕಲಾದ ಬೃಹತ್ ಪರದೆಯಲ್ಲಿ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ವೀಕ್ಷಿಸುತ್ತಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಿದ್ದಾರೆ ಎಂಬ ಖುಷಿಯಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಈಗಾಗಲೇ 350ಕ್ಕೂ ಮಿಕ್ಕಿ ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ. ಬಂಟ್ವಾಳದಲ್ಲಿ ನಾನು ಸ್ಪರ್ಧಿಸಿದ್ದ ಸಂದರ್ಭ ವಿಧಾನಸಭೆ ಚುನಾವಣೆಯಲ್ಲಿ 16 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದರ ದುಪ್ಪಟ್ಟು ಅಂದರೆ 30 ಸಾವಿರದಷ್ಟು ಲೀಡ್ ನಳಿನ್ ಕುಮಾರ್ ಕಟೀಲ್ ಅವರಿಗೆ ದೊರಕಿದ್ದು, ಇದು ಬಂಟ್ವಾಳದಲ್ಲೂ ಬಿಜೆಪಿಯ ಪರವಾಗಿ ಜನರಿದ್ದಾರೆ ಎಂಬುದರ ದ್ಯೋತಕ ಎಂದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಪ್ರಮುಖರಾದ ಪುರಸಭಾ ಸದಸ್ಯ ಗೋವಿಂದ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪಕ್ಷ ಪ್ರಮುಖರಾದ ರಮಾನಾಥ ರಾಯಿ ಮೊದಲಾದವರು ಉಪಸ್ಥಿತರಿದ್ದರು. ಸಿಹಿ ಹಂಚಿ ಸಂಭ್ರಮ: ದೇಶ,ರಾಜ್ಯ,ದ.ಕ.ದಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲು ಹಾಕುತ್ತಿದ್ದಂತೆ ಶಾಸಕ ರಾಜೇಶ್ ನಾಯ್ಕ್ ಅವರು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರಿಗೆ ಸಿಹಿ ಹಂಚಿ ಸಂಭ್ರಮಾಚರಣೆಗೈದರು.ಯುವ ಕಾರ್ಯಕರ್ತರು ಪಕ್ಷದ ಕಚೇರಿ ಮುಂದೆ ಡಿಜೆ ಹಾಕಿ ಕುಣಿದು ಕುಪ್ಪಳಿಸಿದರು.ಪ್ರಧಾನಿ ನರೇಂದ್ರಮೋದಿ,ಸಂಸದ ನಳಿನ್ ಕುಮಾರ್ ಜೈಕಾರ ಹಾಕಿದರು.ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು,ಪಕ್ಷದ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.ಕ್ಷೇತ್ರದ ಗ್ರಾಮೀಣ ಭಾಗದಲ್ಲೂ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿರುವುದು ಮತ್ತು ದ.ಕ.ಜಿಲ್ಲೆಯಲ್ಲು ನಳಿನ್ ಕುಮಾರ್ ಕಟೀಲ್ ಅವರು ಭರ್ಜರಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.
ಬಾಕ್ಸ್ ಮಾಡಿ…..
ಹೊಸದಾಖಲೆ:- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ 30,000 ಸಾವಿರ ಮತಗಳ ಮುನ್ನಡೆನ್ನು ನೀಡಿರುವುದು ಹೊಸದಾಖಲೆಯಾಗಿದೆ.ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರು 16 ಸಾವಿರ ಮತಗಳ ಅಂತರದಿಂದ ಗೆಲುವನ್ನು ದಾಖಲಿಸಿದ್ದರು.ಹಾಗೆಯೇ 2014 ರ ಲೋಕಸಭಾ ಚುನಾವಣೆಯಲ್ಲೂ ನಳಿನ್ ಕುಮಾರ್ ಗೆ 10 ಸಾವಿರ ಮತಗಳ ಅಂತರದ ಮುನ್ನಡೆ ನೀಡಿದ್ದು,ಈ ಬಾರಿ ದುಪ್ಪಟ್ಟು ಅಂದರೆ 30 ಸಾವಿರ ಮತಗಳ ಮುನ್ನಡೆಯನ್ನು ಬಂಟ್ವಾಳ ಕ್ಷೇತ್ರದಲ್ಲಿ ದಾಖಲಿಸಿರುವುದು ಶಾಸಕ ರಾಜೇಶ್ ನಾಯ್ಕ್ ಅವರ ಜನಪ್ರಿಯತೆಯನ್ನು ಕ್ಷೇತ್ರದಲ್ಲಿ ಹೆಚ್ಚಿಸಿಕೊಂಡಂತಾಗಿದೆ.ಈ ಬಾರಿ ಬಂಟ್ವಾಳ ಕ್ಷೇತ್ರದಿಂದ 25 ಸಾವಿರ ಮತಗಳ ಮುನ್ನಡೆಯನ್ನು ಬಂಟ್ವಾಳ ಕ್ಷೇತ್ರದ ಶಾಸಕರ ಸಹಿತ ನಾಯಕರು ಗುರಿಯನ್ನಿರಿಸಿ ಪ್ರಚಾರ ಕಾರ್ಯನಡೆಸಿದ್ದರಲ್ಲದೆ ರಣತಂತ್ರವನ್ನು ರೂಪಿಸಿದ್ದರು.ಆದರೆ ಗುರುವಾರ ದ.ಕ.ಜಿಲ್ಲೆಯ ಫಲಿತಾಂಶ ಹೊರಬಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಬಿಜೆಪಿ 30 ಸಾವಿರ ಮತಗಳ ಮನ್ನಡೆಯನ್ನು ನೀಡಿದ್ದು,ಶಾಸಕರ ಮತ್ತು ನಾಯಕರ ನಿರೀಕ್ಷೆಯನ್ನೆ ಮೀರಿದ್ದರಿಂದ ಶಾಸಕ ಸಹಿತ ನಾಯಕರು ಫುಲ್ ಖುಷ್ ನಲ್ಲಿದ್ದಾರೆ. ಬಾಕ್ಸ್ ಎಂಡ್……. ಬಿಕೋ ಬಂಟ್ವಾಳ : ಚುನಾವಣಾ ಫಲಿತಾಂಶದ ಹಿನ್ನಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಬಂಟ್ವಾಳ,ಬಿ.ಸಿ.ರೋಡ್ ಪರಿಸರ ಬಿಕೋ ಅನಿಸುತ್ತಿತ್ತು.ಸರಕಾರಿ ಕಚೇರಿಗಳ ಮೂಲಸ್ಥಾನ ಬಿ.ಸಿ.ರೋಡಿನ ಮಿನಿವಿಧಾನಸೌಧದಲ್ಲಿ ಜನಗಳ ಓಡಾಟವೇ ಇರಲಿಲ್ಲ. ಬಸ್ ನಿಲ್ದಾಣ,ರಸ್ತೆಯಲ್ಲು ಜನಸಂಚಾರ ವಿರಳವಾಗಿತ್ತು.ಎಲ್ಲರೂ ಮನೆಯಲ್ಫಿ ಕುಳಿತು ಫಲಿತಾಂಶದ ವೀಕ್ಷಣೆಯಲ್ಲೇ ತಲ್ಲಿನರಾಗಿದ್ದರು.ಯಾವುದೇ ಅಹಿತಕರ ಘಟನೆಗೆ ಅಸ್ಪದವಿಲ್ಲದಂತೆ ತಾಲೂಕಿನಾದ್ಯಾಂತ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.ಮೆರವಣಿಗೆ,ಪಟಾಕಿ ಸಿಡಿಸುವುದಕ್ಕೆ ಜಿಲ್ಲಾಡಳಿತ ನಿಷೇಧಿಸಿರುವ ಹಿನ್ನಲೆಯಲ್ಲಿ ನಗರಭಾಗದ ಎಲ್ಲೂ ಮೆರವಣಿಗೆ,ಪಟಾಕಿ ಸಿಡಿಸಿರುವುದು ಕಂಡುಬಂದಿಲ್ಲ ,ಆದರೆ ಗ್ರಾಮೀಣಭಾಗದಲ್ಲಿ ಇವೆಲ್ಲವು ನಡೆದಿದೆ.



