ಕೈಕಂಬ : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಶುಕ್ರವಾರ(ಮಾ.5) ನೀರುಮಾರ್ಗದಿಂದ ಬಜ್ಪೆ-ಅದ್ಯಪಾಡಿ, ಗಂಜಿಮಠದವರೆಗೆ ರೋಡ್ ಶೋ, ಮನೆಮನೆ-ದೇವಸ್ಥಾನ, ದೈವಸ್ಥಾನ, ಚರ್ಚು, ಮಸೀದಿಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.
ಅದ್ಯಪಾಡಿಯಿಂದ ಆಗಮಿಸಿದ ರೈ ಪೆರಾರ ಬಲವಂಡಿ ದೈವಸ್ಥಾನಕ್ಕೆ ಭೇಟಿ ನೀಡಿದರು. ಗುರುಪುರ ಕೈಕಂಬದ ಸೂರಲ್ಪಾಡಿಯಲ್ಲಿ ಸ್ಥಳೀಯರನ್ನುದ್ದೇಶಿಸಿ ಮಾತನಾಡಿದರು. ಬಳಿಕ ಗಂಜಿಮಠ ಮಹಾಗಣಪತಿ ದೇವಸ್ಥಾನ ಮತ್ತು ಸ್ಥಳೀಯ ಗ್ರಾಮಗಳಿಗೆ ಭೇಟಿ ನೀಡಿ, ಕೈಕಂಬ ಗಣೇಶ ಕಟ್ಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸಿದ್ದು, ಯುವ ನಾಯಕ ರಾಹುಲ್ ಗಾಂಧಿ ನಾಯಕತ್ವಕ್ಕೆ ಯುವ ಜನರಿಂದ ಹಿಡಿದು ಎಲ್ಲ ವರ್ಗಗಳ ಮತದಾರರಿಂದ ಒಲವು ವ್ಯಕ್ತವಾಗಿದೆ. ಮಾತಿನಲ್ಲೇ ಮೋಸಗೊಳಿಸುವ ಮೋದಿ ಸರ್ಕಾರದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಾಗಿದ್ದು, ಅಭಿವೃದ್ಧಿಗಾಗಿ ಜನತೆ ಇಂದಿರಾ ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನೇ ಎದುರು ನೋಡುತ್ತಿದ್ದಾರೆ ಎಂದರು.
ರೋಡ್ ಶೋ ಮತ್ತು ಮತದಾರರ ಭೇಟಿ ಸಂದರ್ಭದಲ್ಲಿ ರೈ ಜೊತೆಯಲ್ಲಿ ಮಾಜಿ ಶಾಸಕ ಮೊೈದಿನ್ ಬಾವ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯರಾದ ಸುನಿಲ್ ಪೂಜಾರಿ, ಸಚಿನ್ ಅಡಪ, ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಜಾಕಿರ್ ಹಾಗೂ ಕಾಂಗ್ರೆಸ್ ಮುಖಂಡರಾದ ಪೃಥ್ವೀರಾಜ್, ಕಣಚೂರು ಮೋನು,ಬಾಷಾ ಮಾಸ್ಟರ್, ಸುರೇಂದ್ರ ಕಂಬಳಿ, ಗಣೇಶ್ ಪೂಜಾರಿ, ಇಂತಿಯಾಜ್, ಎ. ಕೆ ಅಶ್ರಫ್ ಅಡ್ಡೂರು, ಬೂಬಪೂಜಾರಿ ಗಂಜಿಮಠ, ಮಜೀದ್, ಸೆಲಿನಾ ಮೊದಲಾದವರು ಇದ್ದರು.
