ಪೊಳಲಿ: ದೇವಿಯ ಸೇವೆ ಮಾಡಲು ನಮಗೆಲ್ಲ ಅವಕಾಶ ಸಿಕ್ಕಿರುವುದು ನಮ್ಮ ಪೂರ್ವಜನ್ಮದ ಸುಕೃತ. ಅತಿ ಎತ್ತರ ವಿಗ್ರಹ ಇರುವ, ಒಂದು ತಿಂಗಳ ಜಾತ್ರೆ ನಡೆಯುವ, ಚೆಂಡಾಟದ ಸಾಹಸ ನಡೆಸುವ ಮೂಲಕ ಮೂರು ವಿಶೇಷತೆಗಳನ್ನು ಪೊಳಲಿ ಒಳಗೊಂಡಿದೆ. ಇಂಥಾ ದೇವಿಯ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನಿಜಕ್ಕೂ ನಮ್ಮ ಯೋಗ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಅವರು ಪೊಳಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಪೊಳಲಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಆಶೀರ್ವಚನ ನೀಡಿ ಮಾತಾಡಿದ ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬ್ರಹ್ಮದೇವನಿಗೆ ದ.ಕ ಜಿಲ್ಲೆಯಲ್ಲಿ ಹಲವಾರು ದೇವಸ್ಥಾನಗಳಿವೆ ಇದರೊಂದಿಗೆ ಇಲ್ಲಿ ನಾಗಾರಾಧನೆ, ದುರ್ಗಾರಾಧನೆ, ವಿಷ್ಣು ಆರಾಧನೆ, ರುದ್ರಾರಾಧನೆ, ಭೂತಾರಾಧನೆಯೂ ಇರುವುದು ಇಲ್ಲಿನ ವಿಶೇಷ. ಬ್ರಹ್ಮಸೃಷ್ಟಿಯೇ ಒಂದು ಅದ್ಭುತ ಎಂದು ಅಭಿಪ್ರಾಯಿಸಿದರು.
ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಮಾತಾಡಿ, ಲಕ್ಷಾಂತರ ಭಕ್ತರಿಗೆ ಮಾತೆಯ ಸೇವೆ ಭಾಗ್ಯ ಒದಗಿಸುವ ಮೂಲಕ ಅನುಗ್ರಹ ನೀಡಿದ್ದಾಳೆ ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ದ.ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಪೊಳಲಿ ಸಾವಿರ ಸೀಮೆಯು ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‍ನ ಮೂಲಕ ಶೃಂಗಾರಗೊಂಡು ಉತ್ಸವದ ಕಳೆ ಬಂದಿದೆ. ಯಾರಿಗೆ ಯೋಗ ಇದೆಯೋ ಅವರಿಗೆ ಮಾತೆಯ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು.
ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಿ, ಪೊಳಲಿಯಲ್ಲಿ ಮಾತೆ ರಾಜರಾಜೇಶ್ವರಿ ಜಾಗೃತ ಸ್ಥಿತಿಯಲ್ಲಿದ್ದು, ಸ್ವಲ್ಪ ಜಪ-ತಪ ಮಾಡಿದರೂ ಮಾತೆ ಶೀಘ್ರ ಪ್ರಸನ್ನಗೊಂಡು ಅನುಗ್ರಹಿಸುತ್ತಾಳೆ.
ಪೊಳಲಿಯಷ್ಟು ದೊಡ್ಡದಾದ ಮೃಣ್ಮಯ ಮೂರ್ತಿ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಸುರಥ-ಸಮಾಧಿಗೆ ಪ್ರಸನ್ನಗೊಂಡ ಮಾತೆ ಇಲ್ಲೇ ಸ್ಥಿರಸ್ಥಾಯಿಯಾಗಿ ಉಳಿದುಕೊಂಡಿದ್ದು ಮಾತೆಯ ಆರಾಧಿಸಿದರೆ ಪ್ರಸನ್ನಗೊಂಡು ಭಕ್ತರಿಗೆ ಬೇಗ ಅನುಗ್ರ ನೀಡುತ್ತಾಳೆ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ರಘುನಾಥ ಸೋಮಯಾಜಿ, ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿಯ ಆಡಳಿತ ಮೊಕ್ತೇಸರ ಸಾಯಿರಾಮ್, ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರಿನ ಅಧ್ಯಕ್ಷರಾದ ಕೃಷ್ಣ ಅತ್ತಾವರ, ಮೊಕ್ತೇಸರ ಯು. ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್ ಸೇರಿ ಹಲವರು ಉಪಸ್ಥಿತರಿದ್ದರು.


