ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಜರಗುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಮಳಲಿಯಿಂದ ಫಲ್ಗುನಿ ನದಿ ಮುಖಾಂತರ ಪೊಳಲಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗಾಗಿ ಬೋಟ್ ಉದ್ಘಾಟನೆಯನ್ನು ಪೊಳಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ನೆರವೇರಿಸಿದರು.

ಮಂಗಳೂರು ಉಪವಿಭಾಗದ ಅಧಿಕಾರಿಗಳಿ ಬೋಟ್ ಅಳವಡಿಸಲು ಅನುಮತಿ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಮನವಿ ಸಲ್ಲಿಸಿದ್ದರು. ಅದರಂತೆ ಮುರ್ಡೇಶ್ವರದ ಎನ್‍ಸಿ ವಾಟರ್ ಸ್ಪೋಟ್ರ್ಸ್ ಆಂಡ್ ಅಡ್ವೆಂಚರ್ಸ್ ಸಂಸ್ಥೆಯ ಒಟ್ಟು ಆರು ಯಾಂತ್ರೀಕೃತ ಬೋಟ್‍ಗಳು ಮಳಲಿಯಿಂದ ಪೊಳಲಿಗೆ ಹಾಗು ಪೊಳಲಿಯಿಂದ ಮಳಲಿಗೆ ಸಂಚಾರ ನಡೆಸಲಿದೆ. ಒಟ್ಟು 8 ಮಂದಿ ಸಾಮಥ್ರ್ಯವಿರುವ ಬೋಟ್ ಇದಾಗಿದ್ದು, ಯಾಂತ್ರೀಕೃತವಾಗಿರುವುದರಿಂದ ಭಕ್ತರಿಗೆ ಶೀಘ್ರಸಂಚರಿಸಲು ಅನುಕೂಲವಾಗಲಿದೆ.

ಕಾಜಿಲ-ಸಾದೂರು ಮುಖಾಂತರ ಕಡಪುಕರ್ಯದಿಂದ ಪಡ್ಯಪು ತನಕ ಹಾಗು ಮಳಲಿ ಪೇಟೆಯಿಂದ ಕುರ್ವೆಮಾರ್ ಮುಖಾಂತರ ಪೊಳಲಿಗೆ ತಲಾ ಮೂರಂತೆ ಒಟ್ಟು ಆರು ಬೋಟ್‍ಗಳು ಸಂಚಾರ ನಡೆಸಲಿವೆ. ಯಾವುದೇ ಅಪಾಯ ಸಂಭವಿಸದಂತೆ ಲೈಫ್‍ಜಾಕೆಟ್ ವ್ಯವಸ್ಥೆಯೂ ಇದೆ. ನುರಿತ ಅಂಬಿಗರಾಗಿರುವ ರೋಹಿದಾಸ್ ಹಾಗೂ ಪ್ರದೀಪ್ ನೇತೃತ್ವದ ತಂಡ ದೋಣಿಗಳನ್ನು ನಡೆಸಲಿದ್ದಾರೆ. ಇದರಿಂದಾಗಿ ಮಳಲಿಯ ಭಕ್ತರ ಬಹುನಿರೀಕ್ಷೆಯ ಬೇಡಿಕೆ ಈಡೇರಿದಂತಾಗಿದೆ.
ಶಾಸಕ ರಾಜೇಶ್ ನಾಯ್ಕ್ ಬೋಟ್ ಉದ್ಘಾಟಿಸಿದ ಬಳಿಕ ಸ್ವತಃ ದೋಣಿಯಲ್ಲಿ ಸಂಚರಿಸಿ ಪೊಳಲಿ ದೇವಸ್ಥಾನಕ್ಕೆ ತೆರಳಿ ಯಾವುದೇ ಅಪಾಯ ಸಂಭವಿಸದಂತೆ ದೇವಿಯಲ್ಲಿ ಪ್ರಾರ್ಥಿಸಿದರು. ಈ ವೇಳೆ ಸ್ಥಳೀಯ ಯುವ ಮುಖಂಡರುಗಳಾದ ಚಂದ್ರಹಾಸ್ ಶೆಟ್ಟಿ ನಾರಳ, ಸೋಹನ್ ಅಥಿಕಾರಿ, ಮಾಧವ ಕಾಜಿಲ ಸೇರಿ ಸ್ಥಳೀಯ ಸಂಘಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಸೇರಿ ಹಲವು ಮಂದಿ ಉಪಸ್ಥಿತರಿದ್ದರು.
