ಸುದ್ದಿ9:ಮಂಗಳೂರು, ಸೆ.15-ಸೌದಿ ಅರೇಬಿಯಾದ ರಾಜಧಾನಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸುರತ್ಕಲ್ ಬಳಿಯ ಜೋಕಟ್ಟೆ ಹಾಗೂ ಪೊಳಲಿ ಸಮೀಪದ ಗುರುಪುರದ ಯುವಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟವರನ್ನು ಗುರುಪುರದ ನಿವಾಸಿ ಶಾರುಖ್(24) ಹಾಗೂ ಜೋಕಟ್ಟೆ ನಿವಾಸಿ ಶಾಖಿರ್ (26) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಇನ್ನಿತರ ಇಬ್ಬರೊಂದಿಗೆ ಕಾರಿನಲ್ಲಿ ಸೌದಿ ಅರೇಬಿಯಾದ ಜುಬೈಲ್ ನಗರದಿಂದ ಸುಮಾರು 130 ಕಿ.ಮೀ.ದೂರದ ಬಂದರು ನಗರಿಯ ರಸ್-ಅಲ್-ಖೈರ್ ಎಂಬಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು. ಅಪಘಾತ ನಡೆದ ಸ್ಥಳದಲ್ಲಿಯೇ ಶಾರುಖ್ ಹಾಗೂ ಶಾಖಿರ್ ಮೃತಪಟ್ಟರೆ ಜೊತೆಯಲ್ಲಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಇವರೆಲ್ಲಾ ಜುಬೈಲ್ನಲ್ಲಿರುವ ಅರೇಬಿಯನ್ ಕ್ಲೌಡ್ ಕಂಪೆನಿಯಲ್ಲಿ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದು ಕೆಲಸದ ನಿಮಿತ್ತ ಕಾರಿನಲ್ಲಿ ಸಂಚರಿಸುತ್ತಿದ್ದರೆನ್ನಲಾಗಿದೆ. ಇಬ್ಬರ ಮೃತದೇಹವು ಜುಬೈಲ್ನ ಸೆಂಟ್ರಲ್ ಆಸ್ಪತ್ರೆಯಲ್ಲಿದ್ದು, ಶವವನ್ನು ಮಂಗಳೂರಿಗೆ ತರಲು ಪ್ರಯತ್ನ ಸಾಗಿದೆ ಎಂದು ತಿಳಿದು ಬಂದಿದೆ.


