ಕೈಕಂಬ: ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರತೀ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಆದರೆ ಈ ಬಾರಿ ದೇವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಿ ಬ್ರಹ್ಮಕಲಶೋತ್ಸವ ಜರಗಲಿರುವುದು ವಿಶೇಷ. ಈ ದೇಗುಲವು ಸುಮಾರು 200 ವರ್ಷಕ್ಕಿಂತಲೂ ಮುಂಚೆ ಜೀಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿರುವ ಸಾಧ್ಯತೆ ಇದೆ. ಈ ಬಾರಿ ಬ್ರಹ್ಮಕಲಶೋತ್ಸವವನ್ನು ನೋಡುವ ಭಾಗ್ಯ ಇಂದಿನ ಪೀಳಿಗೆಗೆ ದೊರಕಿರುವುದು ಪುಣ್ಯ. ಮಾರ್ಚ್ 4ರಿಂದ 13ರ ತನಕ ಯಾವುದೇ ಅಡಚಣೆಯಾಗದಂತೆ ಬ್ರಹ್ಮಕಲೋತ್ಸವ ಸೇರಿ ನಾನಾ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಪೊಳಲಿಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲಾಗಿದೆ. ದೇವಸ್ಥಾನದ ನವೀಕರಣಕ್ಕೆ 18 ಕೋ. ರೂ. ಖರ್ಚು ತಗಲಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 8 ಕೋ.ರೂ. ಸಂಗ್ರಹಿಸಲಾಗಿದೆ. 60 ಲಕ್ಷ ಹುಂಡಿ ಹಣ, ದಾನಿಗಳಿಂದ 3 ಕೋ. ದೇವಸ್ಥಾನ ನಿಧಿ 5 ಕೋ. ಸೇರಿ ಒಟ್ಟು 14.7 ಕೋ.ರೂ. ಖರ್ಚಾಗಿದ್ದು ಒಟ್ಟು 20 ಕೋ. ಖರ್ಚಾಗುವ ಸಾಧ್ಯತೆ ಇದ್ದು ಹಣಕಾಸಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜೀರ್ಣೋದ್ಧಾರ ಸಮಿತಿಯ ಪ್ರ.ಕಾರ್ಯದರ್ಶಿ- ಆನುವಂಶಿಕ ಮೊಕ್ತೇಸರ ಯು. ತಾರನಾಥ ಆಳ್ವ ಉಳಿಪಾಡಿಗುತ್ತು ಹೇಳಿದರು.
ಅವರು ಮಂಗಳವಾರ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ್ ನಾಯ್ಕ್ ಮಾತನಾಡಿ, ಜಿಲ್ಲೆಯ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಪುನರ್‍ಪ್ರತಿಷ್ಠೆ, ಅಷ್ಠಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಮತ್ತು ಬ್ರಹ್ಮಕಲಶಾಭಿಷೇಕ ಮಾ.4ರಿಂದ ಮಾ. 13ರತನಕ ನಡೆಯಲಿರುವುದರಿಂದ ದೇವಸ್ಥಾನದ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದೆ. ಶ್ರೀ ದುರ್ಗಾಪರಮೇಶ್ವರಿ, ಶ್ರೀರಾಜರಾಜೇಶ್ವರೀ, ಶ್ರೀಮಹಾಗಣಪತಿ, ಶ್ರೀಸುಬ್ರಹ್ಮಣ್ಯ, ಶ್ರೀಭದ್ರಕಾಳಿ, ದೇವರು ಮತ್ತು ಪರಿವಾರ ಸಾನಿಧ್ಯಗಳ ಗರ್ಭಗೃಹ ಪುನರ್‍ನಿರ್ಮಾಣಗೊಂಡಿದೆ. ಸುಮಾರು 20 ಕೋ.ರೂ. ವೆಚ್ಚದಲ್ಲಿ ದೇವಸ್ಥಾನವು ನವೀಕೃತಗೊಂಡಿದ್ದು ಊರ-ಪರವೂರ ಭಕ್ತರ ಸಹಾಯ, ಕರಸೇವಕರ ನಿರಂತರ ಶ್ರಮಾದಾನದ ಫಲ ಎಂದರು.
ಶಿಲಾಮಯ, ಕಾಷ್ಠಶಿಲ್ಪ, ದ್ವಾರಗಳಿಗೆ ರಜತ ಕವಚ, ಮೇಲ್ಛಾವಣಿಗೆ ತಾಮ್ರದ ಹೊದಿಕೆ ಹಾಕಲಾಗಿದ್ದು, ಈ ವೇಳೆ ಧ್ವಜಸ್ತಂಭ, ದೀಪಸ್ತಂಭ ಪ್ರತಿಷ್ಠೆಯೂ ನಡೆಯಲಿದೆ. ಮಾ.4ರಿಂದ ಮಾ.13ರತನಕ ವಿವಿಧ ವೈದಿಕ ವಿಧಿವಿಧಾನಗಳು, ಧಾರ್ಮಿಕ ಸಭಾ ಕಾರ್ಯಕ್ರಮಗಳು, ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತರಿಗೆ ಉಪಾಹಾರ, ಅನ್ನದಾಸೋಹ ನಡೆಯಲಿದೆ. ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ವಿವಿಧ ಉಪಸಮತಿ ರಚಿಸಲಾಗಿದ್ದು, ಈಗಾಗಲೇ 3000 ಮಂದಿ ಸ್ವಯಂಸೇವಕಾರಾಗಿ ನೋಂದಣಿ ಮಾಡಿದ್ದು, ಇದರಲ್ಲಿ 2000 ಪುರುಷರು ಹಾಗೂ 1000 ಮಂದಿ ಮಹಿಳೆಯರು ಇದ್ದು ಇದರ ಸಂಖ್ಯೆ 10000 ತಲುಪುವ ಸಾಧ್ಯತೆ ಇದೆ. ಪುರುಷರು ಹಾಗೂ ಮಹಿಳೆಯರ ಪ್ರತ್ಯೇಕ ತಂಡ ರಚನೆ ಮಾಡಲಾಗಿದ್ದು ಪುರುಷರ ಒಂದು ತಂಡದಲ್ಲಿ 30, ಮಹಿಳೆಯರ ಒಂದು ತಂಡದಲ್ಲಿ 20 ಮಂದಿ ಇರಲಿದ್ದಾರೆ.
ದೇವಸ್ಥಾನದ ಎರಡು ಕಡೆಗಳಲ್ಲಿ ತಲಾ 10 ಎಕ್ರೆಯಂತೆ 20 ಎಕ್ರೆ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ದ್ವಿಚಕ್ರ, ತ್ರಿಚಕ್ರ ಹಾಗೂ ಚತುಷ್ಚಕ್ರ ವಾಹನಗಳಿಗೆ ವ್ಯವಸ್ಥೆ ಇದ್ದು, ಭಕ್ತರಿಗೆ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಲಾಗುವುದು. ದೇವಸ್ಥಾನದ ಸುತ್ತಮುತ್ತಲ ಪ್ರದೇಶ ಸಂಪೂರ್ಣ ಸಿಸಿ ಕೆಮರಾದ ಕಣ್ಗಾವಲಿಗೆ ಒಳಪಡಲಿದೆ ಸುಮಾರು 50 ಶೌಚಾಲಯ ನಿರ್ಮಿಸಲಾಗಿದೆ. ಸುಮಾರು 10 ಲಕ್ಷ ಮಂದಿ ಭಕ್ತರ ಆಗಮನದ ನಿರೀಕ್ಷೆ ಇದ್ದು, ಮಾಚ್ 13ರ ಪ್ರತಿಷ್ಠೆಯ ದಿನ ದೇವರ ದರ್ಶನಕ್ಕೆ ಅವಕಾಶ ಇದ್ದು ಭಕ್ತರಿಗೆ ದೇವರದರ್ಶನ ಮಾಡಲು ಅನುಕೂಲವಾಗುವಂತೆ ಆ ದಿನ ಯಾವುದೇ ಸಾಂಸ್ಕøತಿಕ ಕಾರ್ಯಕ್ರಮಗಳು ಇರುವುದಿಲ್ಲ ಎಂದು ರಾಜೇಶ್ ನಾಯ್ಕ್ ಹೇಳಿದರು.
ದೇವಸ್ಥಾನದ ಹಳೆ ಕಂಚಿನಿಂದ ಸುಮಾರು 1000ದಷ್ಟು ಮೊಮೆಂಟೋಗಳನ್ನು ತಯಾರಿಸಲಾಗಿದೆ. ಪ್ರಧಾನ ಕಲಶ(ಬೆಳ್ಳಿ) ಒಟ್ಟು 10ರಲ್ಲಿ 9ನ್ನು ಭಕ್ತರು ದೇವರಿಗೆ ಸಲ್ಲಿಸಬಹುದು. 25 ದ್ರವ್ಯಕಲಶ(ತಾಮ್ರ), 25000 ಚಿಕ್ಕ ಬೆಳ್ಳಿಯ ಕಲಶ, 1000 ಚಿಕ್ಕ ತಾಮ್ರದ ಕಲಶವನ್ನು ಭಕ್ತರು ದೇವರಿಗೆ ಸಲ್ಲಿಸಬಹುದಾಗಿದ್ದು, ಬ್ರಹ್ಮಕಲಶೋತ್ಸವದ ಮುನ್ನ ಬುಕಿಂಗ್ ಮಾಡಿಕೊಳ್ಳಬೇಕು ಎಂದು ರಾಜೇಶ್ ನಾಯ್ಕ್ ನುಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ. ನಾಗರಾಜ ಶೆಟ್ಟಿ ಮಾತನಾಡಿ, ಉಡುಪಿ, ಮಂಗಳೂರು ಸೇರಿ ನಾನಾ ಜಿಲ್ಲೆಗಳಿಂದ ಹೊರೆಕಾಣಿಯ ಸಮರ್ಪಣೆ ನಡೆಯಲಿದೆ. ಹೊರೆಕಾಣಿಕೆಯನ್ನು ಸಂಗ್ರಹಿಸಲು ಉಗ್ರಾಣದ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ರೆಡ್‍ಕಾರ್ಪೆಟ್ ಸ್ವಾಗತ ನೀಡಲಾಗುವುದುಎಂದು ತಿಳಿಸಿದರು.

ಪೊಳಲಿಯ ಶ್ರೀರಾಜರಾಜೇಶ್ವರಿ ದೇವಿಯ ಮೂರ್ತಿಯು ಮೃಣ್ಮಯ (ಮಣ್ಣಿನ)ಮೂರ್ತಿಯಾಗಿದ್ದು, ಇದರ ಕಂಚಿನ ಅಭಿಮಾನಿ ಮೂರ್ತಿಗೆ ಬ್ರಹ್ಮಕಲಶೋತ್ಸವ ನಡೆಯಲಿದೆ. ದೇವರ ಮಣ್ಣಿನ ಮೂರ್ತಿಗೆ ಲೇಪಾಷ್ಠಬಂಧ ನಡೆಯಲಿದೆ. ರಾಜರಾಜೇಶ್ವರಿ ಹಾಗೂ ದುರ್ಗಾಪರಮೇಶ್ವರಿ ದೇವರಿಗೆ 500 ಕಲಶ, ಉಳಿದ ಪರಿವಾರ ದೇವರಿಗೆ 108 ಕಲಶದ ಮೂಲಕ ಬ್ರಹ್ಮಕಲಶ ನಡೆಯಲಿದೆ ಎಂದು ಡಾ. ವೆಂಕಟೇಶ ತಂತ್ರಿ ಪೊಳಲಿ ಮಾಹಿತಿ ನೀಡಿದರು.
ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ, ಪ್ರಧಾನ ಅರ್ಚಕರಾದ ಮಾಧವ ಭಟ್, ಗೌರವಾಧ್ಯಕ್ಷ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ, ಅನುವಂಶಿಕ ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಮಾಧವ ಮಯ್ಯ , ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಇದ್ದರು. ಪ್ರಚಾರ ಸಮಿತಿಯ ಅಧ್ಯಕ್ಷೆ ಆಶಾ ಜ್ಯೋತಿ ರೈ ನಿರೂಪಿಸಿದರು. ಸುಬ್ರಾಯ ಕಾರಂತ ಸ್ವಾಗತಿಸಿದರು.


