ಬಂಟ್ವಾಳ:ಜಗತ್ತಿನಲ್ಲಿ ಬಲಿಷ್ಠ ವಿಮಾ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರತೀಯ ಜೀವ ವಿಮಾ ನಿಗಮವು ದೇಶದಲ್ಲಿ ಸುಮಾರು 42 ಕೋಟಿ ಪಾಲಿಸಿದಾರರನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ‘ವಿಮಾ ಗ್ರಾಮ’ ಮತ್ತು ‘ವಿಮಾ ಶಾಲೆ’ ಮತ್ತಿತರ ಹಲವಾರು ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಬಂಟ್ವಾಳ ಎಲ್ಲೈಸಿ ಶಾಖೆ ಉಪ ಶಾಖಾಧಿಕಾರಿ ಸುಂದರ ಎಂ. ಹೇಳಿದ್ದಾರೆ.

ಇಲ್ಲಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಾರತೀಯ ಜೀವ ವಿಮಾ ನಿಗಮ ಸಂಸ್ಥೆ ವತಿಯಿಂದ ‘ವಿಮಾ ಗ್ರಾಮ ಯೋಜನೆ’ಯಡಿ ಮಂಜೂರಾದ ರೂ 25ಸಾವಿರ ವೆಚ್ಚದ ಎರಡು ‘ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಯಂತ್ರ’ವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಗ್ರಾಮದಲ್ಲಿ 100ಕ್ಕೂ ಮಿಕ್ಕಿ ಪಾಲಿಸಿ ದಾಖಲಾದರೆ ಅಲ್ಲಿನ ಶಾಲೆ ಮತ್ತಿತರ ಸಾರ್ವಜನಿಕ ಸಂಸ್ಥೆಗಳಿಗೆ ರೂ 1ಲಕ್ಷಕ್ಕೂ ಮಿಕ್ಕಿ ಮೊತ್ತದ ವಿವಿಧ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಇದೇ ವೇಳೆ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ‘ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಯಂತ್ರ’ ಹಸ್ತಾಂತರಿಸಿದರು.

ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಮೇಶ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎಲ್ಲೈಸಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಮಾತನಾಡಿ, ಪುಟ್ಟ ಮಕ್ಕಳಿಂದ ವಯೋವೃದ್ಧರ ತನಕ ಎಲ್ಲೈಸಿ ಸಂಸ್ಥೆಯಲ್ಲಿ ವಿವಿಧ ಮಾದರಿ ಪಾಲಿಸಿಗಳಿವೆ. ಈ ದೇಶದಲ್ಲಿ ನಿರ್ಜೀವ ವಾಹನಗಳಿಗೆ ಕಡ್ಡಾಯ ವಿಮೆ ಜಾರಿಗೊಳಿಸಿದಂತೆ ವಾಹನ ಚಲಾಯಿಸಲು ಪರವಾನಿಗೆ ಪಡೆಯುವ ಪ್ರತಿಯೊಬ್ಬ ವ್ಯಕ್ತಿಗೂ ಜೀವ ವಿಮೆ ಅಗತ್ಯವಿದೆ ಎಂದರು.

ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಸದಸ್ಯ ಪದ್ಮನಾಭ ಗೌಡ, ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಅಧ್ಯಕ್ಷ ಕೆ.ಪರಮೇಶ್ವರ ಪೂಜಾರಿ, ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಮಹಮ್ಮದ್ ಜಝೀಲ್, ಪ್ರಯೋಗಾಲಯ ತಜ್ಞ ಬಸವರಾಜ್ ಮತ್ತಿತರರು ಇದ್ದರು.ಮುಖ್ಯಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿ, ವಿಮಾ ಪ್ರತಿನಿಧಿ ಮೋಹನ್ ಕೆ.ಶ್ರೀಯಾನ್ ರಾಯಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ವಸಂತ್ ವಂದಿಸಿ, ಶ್ರೀಪತಿ ಭಟ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *