ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರವು ಬಂಟ್ವಾಳ ತಾಲೂಕಿನ ತೋಟಗಾರಿಕಾ ಇಲಾಖೆ ಮತ್ತು ವಿಟ್ಲಾದ ಪಿಂಗಾರ ರೈತ ಉತ್ಪಾದಕರ ಕಂಪನಿಗಳ ಸಹಯೋಗದಿಂದ ಈ ಸದಸ್ಯರುಗಳಿಗೆ ಅಡಿಕೆ, ತೆಂಗು ಮತ್ತು ಕಾಳುಮೆಣಸು ಬೆಳೆಗಳ ವೈಜ್ಞಾನಿಕ ಕೃಷಿಯ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಇದೇ ಶುಕ್ರವಾರ 15ನೇ ಫೆಬ್ರವರಿ 2019 ರಂದು ವಿಟ್ಲಾದಲ್ಲಿ ಏರ್ಪಡಿಸಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಟ್ಲಾದ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಶ್ರೀಮತಿ ದಮಯಂತಿ ಯವರು ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಉತ್ತಮ ಬೆಲೆ ಸಿಗಬೇಕಾದರೆ ಮೌಲ್ಯವರ್ಧನೆ ಮಾಡಿ ಅಧಿಕ ಲಾಭಗಳಿಸಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈPಔ ಸದಸ್ಯರುಗಳಿಗಾಗಿಯೇ ಆಯೋಜಿಸಿರುವ ಈ ವಿಶೇಷ ಕಾರ್ಯಾಗಾರವು ಪಿಂಗಾರ ಸಂಸ್ಥೆಯ ಸದಸ್ಯ ರೈತರು ಸದೂಪಯೋಗ ಮಾಡಿಕೊಳ್ಳಬೇಕು ಮತ್ತು ಇಲ್ಲಿ ಭೋದಿಸುವ ವಿಷಯಗಳ ಬಗ್ಗೆ ವಿಷಯ ತಜ್ಞರುಗಳ ಜೊತೆ ಸಮಾಲೋಚನೆ ಮಾಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಕರೆನೀಡಿದರು.
ಮುಖ್ಯ ಅತಿಥಿಗಳಾದ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು ಮಾತನಾಡಿ ಈ ಕಾರ್ಯಾಗಾರದ ಉದ್ದೇಶ ಹಾಗೂ ಗುರಿಗಳನ್ನು ವಿವರಿಸಿದರು. ತಂತ್ರಜ್ಞಾನದ ಮಧ್ಯಸ್ಥಿಕೆಯಿಂದ ತೋಟಗಾರಿಕೆ ಉತ್ಪಾದನೆಯನ್ನು ಉತ್ತೇಜಿಸುವುದು, ಮೌಲ್ಯಗಳನ್ನು ಹೆಚ್ಚಿಸುವುದು, ಆದಾಯ ದ್ವಿಗುಣಗೊಳಿಸುವುದು, ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಉತ್ತಮ ರೀತಿಯಲ್ಲಿ ಆಧುನಿಕ ಕೃಷಿ ಮೌಲ್ಯ ಸರಪಣಿ ಏಕೀಕರಿಸುವುದರೊಂದಿಗೆ ಗ್ರಾಮೀಣ ಜೀವನೋಪಾಯವನ್ನು ಸುಧಾರಿಸುವುದು ಹಾಗೂ ತಾಂತ್ರಿಕ ಮತ್ತು ಕ್ಷೇತ್ರ ಮಟ್ಟದ ಬೆಂಬಲ ವಿಸ್ತರಿಸುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶಗಳನ್ನು ತಿಳಿಸಿದರು.
ತೋಟಗಾರಿಕಾ ಇಲಾಖೆಯ ನಿರ್ದಿಷ್ಟ ಗುರಿಗಳಾದ ತಾಂತ್ರಿಕ ನೆರವು ಒದಗಿಸುವುದು, ಈPಔ ಸದಸ್ಯರಿಗೆ ಪ್ರಾತ್ಯಕ್ಷತೆ ಮತ್ತು ನಿರ್ದಿಷ್ಟ ಬೆಳೆಯ ಕುರಿತು ತರಭೇತಿ ನೀಡುವುದು, ಸುಧಾರಿತ ತಂತ್ರಜ್ಞಾನ ಕುರಿತು ಶೈಕ್ಷಣಿಕ ಪ್ರವಾಸ ಕೈಗೊಳ್ಳುವುದು, ಸಾಮಥ್ರ್ಯ ಅಭಿವೃದ್ಧಿಗೆ ಅಗತ್ಯವಿರುವ ತರಭೇತಿ ನೀಡುವುದು, ಕೀಟ/ರೋಗಗಳ ಹಾವಳಿ ತೀವ್ರಗೊಂಡಾಗ ಅತೀ ತುರ್ತಾಗಿ ಕ್ಷೇತ್ರಕ್ಕೆ ಭೇಟಿ ನೀಡಿ ಅಗತ್ಯ ತಾಂತ್ರಿಕ ಮಾಹಿತಿ ಒದಗಿಸುವುದು ಹಾಗೂ ಅಭಿವೃದ್ಧಿ ಮತ್ತು ಪುಷ್ಟಿಗೆ ಅಗತ್ಯವಿರುವ ಚಟುವಟಿಕೆಗಳನ್ನು ಕೈಗೊಳ್ಳುವುದು ಇತ್ಯಾದಿಗಳನ್ನು ನಡೆಸುವುದು ಮುಖ್ಯವಾದುವುಗಳೆಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ ಮತ್ತು ವಿಟ್ಲಾದಲ್ಲಿರುವ ಕೇಂದ್ರಿಯ ತೋಟಗಾರಿಕಾ ಬೆಳೆಗಳ ಸಂಶೋದನಾ ಸಂಸ್ಥೆಗಳಲ್ಲಿ ಸೇವೆಸಲ್ಲಿಸುತ್ತಿರುವ ವಿಜ್ಞಾನಿಗಳ ಸಲಹೆ ಸೂಚನೆಗಳನ್ನು ಅನುಸರಿಸಿ ವೈಜ್ಞಾನಿಕ ರೀತಿಯ ವಿಧಾನಗಳನ್ನು ಅನುಸರಿಸಿದೇ ಆದರೆ ಸುತ್ತಮುತ್ತಲಿನ ರೈತ ಭಾಂದವರಿಗೆ ಸುಧಾರಿತ ಬೆಳೆಗಳ ಬೇಸಾಯ ಪದ್ದತಿಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಬಂಟ್ವಾಳ ತಾಲೂಕಿನ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಶ್ರೀ ದಿನೇಶ್ ರವರು ಮಾತನಾಡಿ ರೈತರು ಬೆಳೆಸಿದ ಬೆಳೆಗಳನ್ನು ಬ್ರಾಂಡ್‍ನ ಮೂಲಕ ಮಾರಟ ಮಾಡಿದರೆ ತಾವು ಮಾಡಿದ ಉತ್ಪಾದನೆಗೆ ನ್ಯಾಯವಾದ ಬೆಲೆಗಳಿಸಬಹುದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೈತರು ತಮ್ಮ ತಾಕುಗಳಲ್ಲಿ ವೈಜ್ಞಾನಿಕ ಮತ್ತು ಸಂಶೋದನಾ ಕೇಂದ್ರಗಳಲ್ಲಿ ಲಭ್ಯವಿರುವ ತಾಂತ್ರಿಕತೆಗಳನ್ನು ಬಳಸಿ ಕೃಷಿಯನ್ನು ಕೈಗೊಂಡರೆ ಅಧಿಕ ಲಾಭಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಟ್ಲಾದ ಪಿಂಗಾರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಶ್ರೀ ರಾಮಕೀಶೋರ್ ಕೆ. ರವರು ಮಾತನಾಡಿ, ಈPಔ ರೈತರಿಗಾಗಿ ಆಯೋಜಿಸಿರುವ ಈ ಕಾರ್ಯಕ್ರಮ ಉತ್ತಮವಾದುದ್ದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ರೈತರುಗಳು ಭಾಗವಹಿಸಿ ಇದರ ಪ್ರಯೋಜನ ಪಡೆಯಲು ಸೂಚಿಸಿದರು. ವಿಟ್ಲಾದ ಕೇಂದ್ರಿಯ ತೋಟಗಾರಿಕಾ ಬೆಳೆಗಳ ಸಂಶೋದನಾ ಸಂಸ್ಥೆಯ ವಿಜ್ಞಾನಿ ಡಾ| ಎಲ್. ಆರ್. ನಾಗರಾಜ ಮತ್ತು ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರದ ವಿಜ್ಞಾನಿ ಹರೀಶ್ ಶೆಣೈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಅಡಿಕೆ, ತೆಂಗು ಮತ್ತು ಕಾಳುಮೆಣಸು ಬೆಳೆಗಳ ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿ ಒದಗಿಸಿದರು.
ಶ್ರೀ ಪದ್ಮನಾಭ ಪ್ರಾರ್ಥಿಸಿದರು. ನಿರ್ದೇಶಕರಾದ ಶ್ರೀ ಸದಾನಂದ ಗೌಡ ಸ್ವಾಗತಿಸಿದರು. ಶ್ರೀ ಜನಾರ್ಧನ ಪದ್ಮಶಾಲಿ ನಿರೂಪಿಸಿದರು. ಮೀನುಗಾರಿಕಾ ವಿಜ್ಞಾನಿ ಗಣೇಶ್‍ಪ್ರಸಾದ್ ಎಲ್. ವಂದಿಸಿದರು.
