ಪೊಳಲಿ: ಜೀರ್ಣೋದ್ಧಾರ ಕಾರ್ಯ ಕೊನೆಯ ಹಂತದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾರ್ಚ್ 4ರಿಂದ 13ರವರೆಗೆ ಜರುಗಲಿರುವ ಪುನರ್ಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜಸ್ತಂಭ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕದ ಕಾರ್ಯ ನಿರ್ವಹಣೆಗಾಗಿ ಫೆ. 15ರಂದು ಪೊಳಲಿ ವ್ಯಾಪ್ತಿಯ ಸಾವಿರ ಸೀಮೆಯ ಸಂಘ ಸಂಸ್ಥೆಗಳ ಮಹಿಳಾ ಪದಾಧಿಕಾರಿಗಳ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ ಮಾತನಾಡುತ್ತ, ಮಹಿಳಾ ಸಮಿತಿಗಳ ಕಾರ್ಯವೈಖರಿ ಬಗ್ಗೆ ವಿಸ್ತøತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆನುವಂಶಿಕ ಮೊಕ್ತೇಸರ ಉಳಿಪಾಡಿಗುತ್ತು ತಾರನಾಥ ಆಳ್ವ ಉಪಸ್ಥಿತರಿದ್ದು, ಉಪಯುಕ್ತ ಮಾಹಿತಿ ನೀಡಿದರು.
“ಈ ಪುಣ್ಯ ಕಾರ್ಯದಲ್ಲಿ ನಮ್ಮಿಂದ ಸಾಧ್ಯವಿರುವ ಕೆಲಸ ಎಲ್ಲೆಲ್ಲಿದೆಯೋ ಅದನ್ನೆಲ್ಲ ಮಾಡುವ ಜವಾಬ್ದಾರಿ ನಾವು ವಹಿಸಿಕೊಂಡು, ಅದನ್ನು ಚೊಕ್ಕವಾಗಿ ಮಾಡಬೇಕು. ಮಹತ್ವದ ಮಾಹಿತಿಗಳನ್ನು ಸಮಿತಿ ಸದಸ್ಯರು ಹಂಚಿಕೊಂಡು, ಅಗತ್ಯವಿರುವಲ್ಲಿ ತಕ್ಷಣ ಕೆಲಸಕ್ಕೆ ಜನ ಹಚ್ಚಬೇಕು” ಎಂದು ಆಶಾಜ್ಯೋತಿ ರೈ ಸಮಿತಿಯ ಮಹಿಳೆಯರಿಗೆ ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸುಗಮಗೊಳಿಸುವ ನಿಟ್ಟಿನಲ್ಲಿ ಹಲವು ಮಹಿಳಾ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಾವತಿ, ಮೇರಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಹಾಗೂ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸುಬ್ರಾಯ ಕಾರಂತ ಕಾರ್ಯಕ್ರಮ ನಿರ್ವಹಿಸಿದರು.



