ಬಂಟ್ವಾಳ : ಎ.ಜೆ. ಸಮುದಾಯ ವಿಭಾಗ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವು ಮೆಲ್ಕಾರ್ ನ ಎ.ಜೆ.ಆರೋಗ್ಯ ತರಬೇತಿ ಕೇಂದ್ರದಲ್ಲಿ ನಡೆಯಿತು. ಎ.ಜೆ. ಆಸ್ಪತ್ರೆಯ ಡೀನ್ ಡಾ.ಅಶೋಕ್ ಹೆಗ್ಡೆಯವರು ಶಿಬಿರವನ್ನು ಉದ್ಘಾಟಿಸಿ, ಕ್ಯಾನ್ಸರ್ ನ ಗುಣಲಕ್ಷಣಗಳು ಕಂಡುಬಂದರೆ ಪ್ರಥಮ ಹಂತದಲ್ಲೇ, ವೈದ್ಯರ ತಪಾಸಣೆಗೊಳಪಟ್ಟು ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಂಡರೆ ಕ್ಯಾನ್ಸರ್‌ನಿಂದಾಗುವ ಸಾವು-ನೋವುಗಳನ್ನು ತಡೆಗಟ್ಟಬಹುದು ಎಂದರು.

ಸಮುದಾಯ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಚೇತನಾ ಕ್ಯಾನ್ಸರ್ ದಿನಾಚರಣೆಯ ಉದ್ದೇಶ, ಉಚಿತ ಕ್ಯಾನ್ಸರ್ ತಪಾಸಣೆಯಕುರಿತು ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮುದಾಯ ವಿಭಾಗದ ಮುಖ್ಯಸ್ಥರಾದ ಬ್ರಿಗೊಡಿಯರ್ ಡಾ. ಹೇಮಂತ್ ಕುಮಾರ್ ಮಾತನಾಡಿ, ಹೆಚ್ಚುತ್ತಿರುವ ಕ್ಯಾನ್ಸರ್‌ಗೆ ಧೂಮಪಾನ, ಮಧ್ಯಪಾನ, ಪರಿಸರ ಮಾಲಿನ್ಯ, ಜಡ ಜೀವನಶೈಲಿ ಕಾರಣವಾಗಿದೆ, ನಿಯಮಿತ ವೈದ್ಯಕೀಯ ತಪಾಸಣೆ, ಸೂಕ್ತ ವೈದ್ಯಕೀಯ ಚಿಕಿತ್ಸೆಯಿಂದ ಕ್ಯಾನ್ಸರ್‌ನ್ನು ಗುಣಪಡಿಸಲು ಸಾಧ್ಯ ಎಂದು ತಿಳಿಸಿದರು.
ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಸಂಯೋಜಕಿ ಶೈಲಾ ಲೋಬೋ, ಎ.ಜೆ. ಆಸ್ಪತ್ರೆಯ ಡೆಪ್ಯೊಟಿ ಮೆಡಿಕಲ್ ಸುಪರಿಟೆಂಡೆಂಟ್ ಡಾ.ಸಚ್ಚಿದಾನಂದ, ಮೆಲ್ಕಾರಿನ ಒ.ಓ. ಕುಮಾರ್ , ಇಸ್ಮಾಯಿಲ್ ನಂದಾವರ, ಎ.ಜೆ. ಗ್ರಾಮೀಣ ತರಬೇತಿ ಕೇಂದ್ರದ ಮಹಿಳಾ ವೈದ್ಯಾಧಿಕಾರಿ ಡಾ. ಜಯಮಾಲಾ ವಿಶ್ವನಾಥ್‌ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ಉಚಿತ ರಕ್ತ , ಬಾಯಿ ಕ್ಯಾನ್ಸರ್ ತಪಾಸಣೆ, ದಂತ ಚಿಕಿತ್ಸಾ ವಿಭಾಗದ, ಎ.ಜೆ.ಯ ವೈದ್ಯಕೀಯ ತಜ್ಞರು, ಸ್ತ್ರೀರೋಗ ತಜ್ಞರು, ಗರ್ಭಕೋಶದ ತಪಾಸಣೆ ಮತ್ತು ಸ್ತನ ಕ್ಯಾನ್ಸರ್ ತಪಾಸಣೆ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ಹೊರಾಂಗಣದಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಬೀದಿನಾಟಕವನ್ನು ಸಮುದಾಯ ವಿಭಾಗದಿಂದ ಸ್ನಾತಕೊತ್ತರ ವಿದ್ಯಾರ್ಥಿಗಳು, ಕಿರಿಯ ವೈದ್ಯರು ಡಾ.ಚೇತನಾ ರವರ ನೇತೃತ್ವದಲ್ಲಿ ನಡೆಯಿತು.
ಸ್ತನ , ಗರ್ಭಕೊರಳಿನ , ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು ೧೦೦ಕ್ಕೂ ಹೆಚ್ಚು ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.
