ಬಂಟ್ವಾಳ: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರಕಾರಿ ಶಾಲೆಯನ್ನು ಉಳಿಸಲು ಗ್ರಾಮಸ್ಥರು ಹಳೇ ವಿದ್ಯಾರ್ಥಿಗಳು, ಹಾಗೂ ಶಿಕ್ಷಣಾಭಿಮಾನಿಗಳು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಇದೇ ಸರಕಾರಿ ಶಾಲೆಗೆ ದಾಖಲಿಸುವ ಮೂಲಕ ಹಾಗೂ ಸರಕಾರಿ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸಿ, ಪೋಷಕರ ಆಶಯದಂತೆ ಆರನೇ ತರಗತಿಯ ಬಳಿಕ ಆಂಗ್ಲ ಮಾಧ್ಯಮದ ಕಲಿಕೆ ಹಾಗೂ ಒಂದನೇಯಿಂದಲೇ ಸ್ಪೋಕನ್ ಇಂಗ್ಲೀಷ್ ತರಗತಿ ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರ ನೇತೃತ್ವದ ತಂಡ ಸರಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಶನಿವಾರ ಹಾಗೂ ಭಾನುವಾರ ಮರೋಡಿಯಲ್ಲಿ ಹಮ್ಮಿಕೊಂಡ ಗ್ರಾಮವಾಸ್ಯವ್ಯ, ಮನೆ ಭೇಟಿ ಹಾಗೂ ಶಿಕ್ಷಣಾಭಿಮಾನಿಗಳೊಂದಿಗೆ ಸಂವಾದ ಕಾರ್ಯಕ್ರಮದ ಫಲಶ್ರೂತಿಯಾಗಿ ಈ ಕ್ರಾಂತಿಕಾರಕ ಬದಲಾವಣೆ ಉಂಟಾಗಿದೆ. 60 ವರ್ಷಗಳ ಇತಿಹಾಸ ಹೊಂದಿರುವ ಕೂಕ್ರಬೆಟ್ಟು ಸರಕಾರಿ ಶಾಲೆಯಲ್ಲಿ ಪ್ರಸ್ತುತ 16 ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಆಂಗ್ಲ ಶಿಕ್ಷಣದ ವ್ಯಾಮೋಹ ಹಾಗೂ ಇನ್ನಿತರ ಕೆಲವು ಕಾರಣಿಗಳಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಈ ಸರಕಾರಿ ಶಾಲೆಗೆ ಕಳುಹಿಸದೇ ದೂರದ ಶಾಲೆಗಳಿಗೆ ಕಳುಹಿಸುತ್ತಿದ್ದರು. ಮುಂದಿನ ಕೆಲವೇ ವರ್ಷಗಳಲ್ಲಿ ಮುಚ್ಚುವ ಹಂತದಲ್ಲಿದ್ದ ಈ ಶಾಲೆಯನ್ನು ಹೇಗಾದರೂ ಮಾಡಿ ಉಳಿಸ ಬೇಕೆನ್ನುವ ಪಣತೊಟ್ಟ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಮನವಿಯ ಮೇರೆಗೆ ಇದೇ ಮೊದಲ ಬಾರಿಗೆ ಸರಕಾರಿ ಶಾಲೆಯೊಂದನ್ನು ಉಳಿಸುವ ನಿಟ್ಟಿನಲ್ಲಿ ಪ್ರಕಾಶ್ ಅಂಚನ್ ನೇತೃತ್ವದ ತಂಡ ಗ್ರಾಮ ವಾಸ್ತವ್ಯ ಮಾಡಿ ಶನಿವಾರ ಹಾಗೂ ಭಾನುವಾರ ಗ್ರಾಮದ ಪ್ರತಿ ಮನೆಗಳಿಗೆ ತೆರಳಿ ಗ್ರಾಮದ ಸರಕಾರಿ ಶಾಲೆಯನ್ನು ಉಳಿಸುವಂತೆ ಮನವಿ ಮಾಡಿಕೊಂಡಿತ್ತು. ಭಾನುವಾರ ಬೆಳಿಗ್ಗೆ 11.30ರ ವೇಳೆಗೆ ಶಾಲೆಯಲ್ಲಿ ಶಿಕ್ಷಣಾಭಿಮಾನಿಗಳ ಸಭೆ ಕರೆದಾಗ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿ ಸರಕಾರಿ ಶಾಲೆ ಉಳಿಸವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಂಡರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಕೂಕ್ರಬೆಟ್ಟು ಸರಕಾರಿ ಶಾಲೆ ಉಳಿಸುವ ದಿಟ್ಟ ನಿರ್ಧಾರವನ್ನು ಗ್ರಾಮಸ್ಥರು ಕೈಗೊಳ್ಳಬೇಕಾಗಿದೆ. ಸರಕಾರಿ ಶಾಲೆ ಉಳಿದರೆ ಅದು ಊರಿನ ಸರ್ವಧರ್ಮದ ದೇಗುಲ ಉಳಿದಂತೆ ಈ ಮಹಾತ್ಕಾರ್ಯದಲ್ಲಿ ಎಲ್ಲಾ ಗ್ರಾಮಸ್ಥರು ಜಾತಿ, ಮತ, ರಾಜಕೀಯ ಬಿಟ್ಟು ಕೈ ಜೋಡಿಸಿ ಕೊಳ್ಳಬೇಕಾಗಿದೆ ಎಂದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮರೋಡಿ ಗ್ರಾ.ಪಂ.ಅಧ್ಯಕ್ಷ ಸದಾನಂದ ಶೆಟ್ಟಿ, ನಿವೃತ್ತ ಶಿಕ್ಷಕರಾದ ಹಿರಿಯಣ್ಣ ಮೊಗವೀರ, ಕೆ.ಎಂ.ಆರಿಗ, ಅಣ್ಣಪ್ಪ ಹೆಗ್ಡೆ, ಹಿರಿಯ ಕೃಷಿಕ ಗೋಪು ಪೂಜಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರದೀಶ್ ಹಾರೊದ್ದು, ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭ ಸರಕಾರಿ ಶಾಲೆ ಉಳಿಸಿ ಬೆಳೆಸಿ ಮರೋಡಿ ಗ್ರಾಮ ಸಮಿತಿ ರಚಿಸಲಾಗಿದ್ದು ಅಧ್ಯಕ್ಷರಾಗಿ ಜಯಂತ್ ಕೋಟ್ಯಾನ್, ಕಾರ್ಯದರ್ಶಿಯಾಗಿ ನಾರಾಯಣ ಉಚ್ಚೂರು ಆಯ್ಕೆಯಾದರು. 20 ಮಂದಿ ಸದಸ್ಯರನ್ನು ನೂತನ ಸಮಿತಿಗೆ ಆಯ್ಕೆಗೊಳಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸುಫಲಾ ಸ್ವಾಗತಿಸಿ, ಸ.ಶಾ.ಉ.ಬೆ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್ ಪ್ರಾಸ್ತವಿಕವಾಗಿ ಮಾತನಾಡಿದರು, ಪ್ರದೀಶ್ ಹಾರೊದ್ದು ವಂದಿಸಿದರು, ಸಹಶಿಕ್ಷಕ ಹರ್ಷಲಾ ಹಾಗೂ ನುಸ್ರುತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ಹಾಗೂ ಕುಂದಾಪುರದ ಶಿಕ್ಷಣಾಭಿಮಾನಿಗಳು ಮರೋಡಿಗೆ ಆಗಮಿಸಿ ತಮ್ಮ ಊರಿನ ಸರಕಾರಿ ಶಾಲೆ ಉಳಸಿವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳುವಂತೆ ಪ್ರಕಾಶ್ ಅಂಚನ್ ಅವರಲ್ಲಿ ಮನವಿ ಮಾಡಿಕೊಂಡರು.
ಚಿತ್ರ: ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಶಿಕ್ಷಣಾಭಿಮಾನಿಗಳ ತಂಡ ಮರೋಡಿ ಗ್ರಾಮದಲ್ಲಿ ಮನೆ ಭೇಟಿ ಕಾರ್ಯಕ್ರಮ ನಡೆಸಿತು.
