ಗುರುಪುರ: ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿನ ಫಲ್ಗುಣಿ ನದಿಗೆ ನೂತನ ಸೇತುವೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್ ಶೆಟ್ಟಿಯವರು ಶನಿವಾರ ಶಿಲಾನ್ಯಾಸ ನೆರವೇರಿಸಿದರು. ಮುಗ್ರೋಡಿ ಕನ್‍ಸ್ಟ್ರಕ್ಷನ್‍ನ ಕಾವೂರು ಡಿ. ಸುಧಾಕರ ಶೆಟ್ಟಿ ಅವರು ಸುಮಾರು 39.420 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದಾರೆ. ಕಾಮಗಾರಿ 2 ವರ್ಷದ ಅವಧಿಯದ್ದಾಗಿದ್ದು, ಒಂದೂವರೆ ವರ್ಷದೊಳಗಡೆ ಕಾಮಗಾರಿ ಮುಗಿಸುವುದಾಗಿ ಡಿ. ಸುಧಾಕರ ಶೆಟ್ಟಿ ಪತ್ರಿಕೆಗೆ ತಿಳಿಸಿದರು.
ಫಲ್ಗುಣಿ ನದಿಗೆ ಸುಮಾರು 96 ವರ್ಷಗಳ ಮುಂಚೆ ಬ್ರಿಟಿಷರು ಸೇತುವೆ ನಿರ್ಮಿಸಿದ್ದು, ಅದರ ಬಾಳಿಕೆಯ ಅವಧಿ ಮುಕ್ತಾಯಗೊಂಡಿದೆ. ಕಳೆದ ಬಾರಿ ತಾಂತ್ರಿಕ ತಂಡ ಪರಿಶೀಲನೆ ನಡೆಸಿ ಸಂಚಾರ ಸಾಧ್ಯವಿಲ್ಲ ಎಂದು ವರದಿ ನೀಡಿತ್ತು. ಇಲ್ಲಿ ನೂತನ ಸೇತುವೆ ನಿರ್ಮಾಣವಾಗಬೇಕೆಂದು ಸಾಕಷ್ಟು ಹೋರಾಟಗಳು ನಡೆದಿತ್ತು ಕೇಂದ್ರ ಸರಕಾರ ಇದಕ್ಕೆ ಅನುದಾನ ಒದಗಿಸಿದೆ. ಹಳೆಯ ಸೇತುವೆಯನ್ನು ಉಳಿಸಿ ಅದರ ಪಕ್ಕದಲ್ಲೇ ನೂತನ ಸೇತುವೆಯ ಕಾಮಗಾರಿ ಆರಂಭಗೊಂಡಿದ್ದು, ಈಗಾಗಲೇ ಮಣ್ಣು ಸಮತಟ್ಟು ಕಾರ್ಯ ಆರಂಭಗೊಂಡಿದೆ ಎಂದು ಸಂಸದರು ತಿಳಿಸಿದರು.
ಕುಲಶೇಖರ ಕಾರ್ಕಳ ಹೆದ್ದಾರಿ ಪ್ರಮುಖ ಸೇತುವೆ ಇದಾಗಿದ್ದು, ಹೆದ್ದಾರಿ ಚತುಷ್ಪಥಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ. ನೂತನ ಹೆದ್ದಾರಿ ಗುರುಪುರದಿಂದ ನೂಯಿ ಅಡ್ಡೂರು ಮುಖಾಂತರ ಕೈಕಂಬ ಹಾದುಹೋಗಿ ಕಾರ್ಕಳ-ಸೋಲಾಪುರ ತಲುಪಲಿದೆ. ಇದಕ್ಕಾಗಿ ಅಡ್ಡೂರು ಬಳಿ ಮತ್ತೊಂದು ಸೇತುವೆ ನಿರ್ಮಾಣಗೊಳ್ಳಲಿದ್ದು, ಸದ್ಯದ ಸೇತುವೆ ಗುರುಪುರಕ್ಕೆ ಸಂಪರ್ಕ ಕಲ್ಪಿಸಲಿದ್ದು ಬೈಪಾಸ್ ರಸ್ತೆಯಾಗಿ ನಿರ್ಮಾಣವಾಗಲಿದೆ. ಭಾರತ್ ಮಾಲ್ ಯೋಜನೆಯಡಿಯಲ್ಲಿ ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹಾಗೂ ಉಮನಾಥ್ ಕೋಟ್ಯಾನ್ ಕ್ಷೇತ್ರಗಳಲ್ಲಿ ಮೂಲ್ಕಿ ಕಟೀಲು ಕೈಕಂಬ ಬಿ.ಸಿ.ರೋಡ್ ರಸ್ತೆ ಚತುಷ್ಪಥಗೊಳ್ಳಲಿದೆ. ಮೆಲ್ಕಾರ್ ಕೊಣಾಜೆ ತೊಕ್ಕೊಟ್ಟು ರಸ್ತೆಯೂ ಮೇಲ್ದರ್ಜೆಗೇರುತ್ತಿದೆ. ಬಿ.ಸಿ. ರೋಡ್ ಅಡ್ಡಹೊಳೆ ರಸ್ತೆ ಕಾನೂನು ಪ್ರಕ್ರಿಯೆ ಸರಿಯಾಗಿದ್ದು ಕಾಮಗಾರಿ ಮತ್ತೆ ಆರಂಭಗೊಂಡಿದೆ. ಕೂಳೂರು ಸೇತುವೆ ಟೆಂಡರ್ ಪೂರ್ಣಗೊಂಡಿದೆ. ಎನ್‍ಡಿಎ ಸರಕಾರ ಮಂಗಳೂರು ಬೈಪಾಸ್ ರಸ್ತೆಗೆ 1700 ಕೋ.ರೂ ಅನುದಾನ ಒದಗಿಸಿದ್ದು, ಪ್ರಧಾನಿ ಮೋದಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ನೇತೃತ್ವದಲ್ಲಿ ರಸ್ತೆಗಳಲ್ಲಿ ಹೆದ್ದಾರಿ ಮಾಡುವ ಕೆಲಸ ನಡೆಯುತ್ತಿದೆ ಎಂದರು.
ಇಂದಿನ ಸಮಾರಂಭದಲ್ಲಿ ಸಂಸದ, ಶಾಸಕರಲ್ಲದೆ ಹಿಂದೂ ಮುಖಂಡ ಜಗದೀಶ ಶೇಣವ, ಕಾಪೋರೇಟರ್ ಹೇಮಲತಾ ಆರ್ ಸಾಲ್ಯಾನ್,ಜಿ.ಪಂ ಸದಸ್ಯ ಜನಾರ್ದನ ಗೌಡ,ಚಂದ್ರಹಾಸ ಶೆಟ್ಟಿ ನಾರ್ಲ, ಶ್ರೀಕರ ಶೆಟ್ಟಿ, ರಾಜೇಶ್ ಸುವರ್ಣ, ಪ್ರಶಾಂತ್ ಮುಂಡ, ನಳಿನಿ ಶೆಟ್ಟಿ, ಸೇಸಮ್ಮ, ಸೋಮಯ್ಯ ಬೆಳ್ಳೂರು, ಚಂದ್ರಶೇಖರ ಶೆಟ್ಟಿ ಕೊಳಕೆಬೈಲು, ಮಾಧವ ಕಾಜಿಲ,ಸುಧಾಕರ ಮಾಡ ಮೊದಲಾದವರಿದ್ದರು.
* ಕುಲಶೇಖರ ಕಾರ್ಕಳ ಚತುಷ್ಪಥ ಭೂಸ್ವಾಧೀನ
ಹೊಸ ಸೇತುವೆ ವೈಶಿಷ್ಠ್ಯತೆ: ಸೇತುವೆಯ ಉದ್ದ 175. ಮೀಟರ್ ಆಗಿರುತ್ತದೆ. 25 ಮೀಟರಿನ ಏಳು ಅಂಕಣಗಳು ಒಳಗೊಳ್ಳಲಿವೆ. ಅಗಲ 16 ಮೀಟರ್, 10 ಮೀಟರ್ ರಸ್ತೆಯ(ಕ್ಯಾರೇಜ್ ಅಗಲ), ಕಾಲುದಾರಿ 3 ಮೀಟರ್ ಅಗಲ ಇರುತ್ತದೆ. ಪೈಲ್ ಅಡಿಪಾಯದ ಸೇತುವೆಯ ಮೇಲ್ಕಟ್ಟಡ ಗಾರ್ಡರ್ ಬೀಮ್ ಮತ್ತು ಸ್ಲ್ಯಾಬ್ ಹೊಂದಿರುತ್ತದೆ. ಜೊತೆಗೆ 500 ಮೀಟರ್ ಉದ್ದದ ಕೂಡುರಸ್ತೆ ನಿರ್ಮಾಣಗೊಳ್ಳಲಿದೆ. ಕಾಮಗಾರಿಯ ಒಟ್ಟು ಅವಧಿ ಎರಡು ವರ್ಷ(24 ತಿಂಗಳು) ಆಗಿರುತ್ತದೆ. ಈಗಾಗಾಲೇ ಜಿಲ್ಲೆಯಲ್ಲಿ ಹಲವು ಕಾಮಗಾರಿ ನಡೆಸಿರುವ ಕಾವೂರು ಮೊಗರೋಡಿ ಕನ್‍ಸ್ಟ್ರಕ್ಷನ್ ಕಂಪೆನಿಯ ಡಿ. ಸುಧಾಕರ್ ಮುಂದಾಳತ್ವದಲ್ಲಿ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣಗೊಳ್ಳಲಿದೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
