ಬಂಟ್ವಾಳ:ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ವಿಭಿನ್ನ ಆರಾಧನೆ ಮತ್ತು ಪರಂಪರೆ ಮೂಲಕ ಗುರುತಿಸಿಕೊಂಡಿರುವ ಈ ಜಿಲ್ಲೆಯಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಕಾರಣಿಕ ಪ್ರಸಿದ್ಧ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರವನ್ನು ರೂ 2.5ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸುವ ಮಹತ್ಕಾರ್ಯದಲ್ಲಿ ಭಾಗವಹಿಸುವುದು ಇಲ್ಲಿನ ಭಕ್ತರಿಗೆ ಸಿಕ್ಕಿದ ಸುಯೋಗವಾಗಿದೆ ಎಂದು ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ತಾಲ್ಲೂಕಿನ ಕಾರಂಬಡೆ ಶ್ರೀ ಮಹಮ್ಮಾಯಿ ಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಬಾಲಾಲಯ ಪ್ರತಿಷ್ಠೆ ಮತ್ತು ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ದೀಪ ಪ್ರಜ್ವಲನಗೊಳಿಸಿದರು.ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಾದ್ಯಂತ ಬಹುತೇಕ ಎಲ್ಲಾ ದೇವಸ್ಥಾನ ಮತ್ತು ದೈವಸ್ಥಾನ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆದಿರುವುದು ಅಲ್ಲಿನ ಭಕ್ತರ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದರು.

ಇದೇ ವೇಳೆ ಜ್ಯೋತಿಷ್ಯ ವಿದ್ವಾನ್ ಸತೀಶ್ ಪಣಿಕ್ಕರ್ ಮತ್ತು ಪುರೋಹಿತ ಕೇಶವ ಶಾಂತಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.ಸ್ಥಳೀಯ ಪುರಸಭಾ ಸದಸ್ಯ ವಾಸು ಪೂಜಾರಿ ಲೊರೆಟ್ಟೊ, ಉದ್ಯಮಿ ಸಂತೋಷ್ ಕುಮಾರ್ ಕೊಟ್ಟಿಂಜ ಮತ್ತಿತರರು ಮಾತನಾಡಿದರು. ಪುರಸಭಾ ಸದಸ್ಯರಾದ ಮೀನಾಕ್ಷಿ, ದೇವಕಿ, ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಅರುಣ್ ಕುಮಾರ್, ಸಮಿತಿ ಪದಾಧಿಕಾರಿಗಳಾದ ಜಯಶಂಕರ ಕಾನ್ಸಾಲೆ, ಕೊರಗಪ್ಪ ಕೊಳಂಬೈಲು, ಕೇಶವ ಪಾಲಡ್ಕ ಮತ್ತಿತರರು ಇದ್ದರು.
ಪತ್ರಕರ್ತ ಗೋಪಾಲ ಅಂಚನ್ ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಅಧ್ಯಕ್ಷ ಹರೀಶ ಕೋಟ್ಯಾನ್ ಕಡಂಬಳಿಕೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನಾಗೇಶ ದರ್ಬೆ ವಂದಿಸಿದರು. ಜಯಾನಮದ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

