ಕೈಕಂಬ:ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಬಿಬಿಎ, ಬಿಎ ಮತ್ತು ಎಂಎಸ್‍ಡಬ್ಲ್ಯೂ ವಿಭಾಗದ 50ಕ್ಕೂ ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಕ್ಷೇತ್ರವಾದ ಗುರುಪುರ ಗ್ರಾಮ ಪಂಚಾಯತಿನಲ್ಲಿ ಶನಿವಾರ(ಜಿ. 19) ಸ್ವಚ್ಚತಾ ಕಾರ್ಯದೊಂದಿಗೆ ತ್ಯಾಜ್ಯ ಪುನರ್‍ಬಳಕೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಪಂಚಾಯತ್ ಆವರಣ ಹಾಗೂ ಸ್ಥಳೀಯ ರಸ್ತೆಗಳಲ್ಲಿ ಬಿದ್ದಿಕೊಂಡಿದ್ದ ಪ್ಲಾಸ್ಟಿಕ್, ತೊಟ್ಟೆ, ಬಾಟಲಿ ತೆರವುಗೊಳಿಸಿದರು. ಬಳಿಕ ಪ್ಲಾಸ್ಟಿಕ್ ಬಾಟಲಿಗಳೊಳಗೆ ಕಾಗದ ಮೊದಲಾದ ತ್ಯಾಜ್ಯ ತುಂಬಿಸಿ, ಅದನ್ನು ಗಟ್ಟಿಗೊಳಿಸಿ ಸಾಮಾನ್ಯ ಪೀಠೋಪಕರಣ ತಯಾರಿಸಿದರು. ಉಳಿದ ಹಸಿ ತ್ಯಾಜ್ಯವನ್ನು ಅಲ್ಲೇ ಕಾದಿದ್ದ ಪಂಚಾಯತ್ ವ್ಯಾನಿಗೆ ತುಂಬಿಸಿದರು.

ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಕಾಲೇಜು ವಿದ್ಯಾರ್ಥಿಗಳ ಈ ಕಾರ್ಯ ಇತರರಿಗೆ ಮಾದರಿಯಾಗಲಿ ಮತ್ತು ಭವಿಷ್ಯದಲ್ಲಿ ಗುರುಪುರ ಗ್ರಾಪಂ ತ್ಯಾಜ್ಯ ಮುಕ್ತವಾಗಲಿ. ನಾವೆಲ್ಲರೂ ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡೋಣ ಎಂದರು.

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳ ತಂಡವಾದ ಸೆಂಟರ್ ಆಫ್ ಸೋಸಿಯಲ್ ಕನ್ಸರ್ನ್ ಏಜೆನ್ಸಿಯ ಅಧೀಕ್ಷಕ ಶರೋನ್ ಹಾಗೂ ತಾಪಂ ಸದಸ್ಯ ಸುನಿಲ್ ಜಿ ಮಾತನಾಡಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ರುಕಿಯಾ, ಗ್ರಾಪಂ ಪಿಡಿಒ ಅಬೂಬಕ್ಕರ್, ತಾಪಂ ಸದಸ್ಯ ಸಚಿನ್ ಅಡಪ, ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಸದಸ್ಯರಾದ ಸಂಪ, ದಾವೂದ್, ಶೋಭಾ, ಸೇಸಮ್ಮ, ಉಮೈ ಭಾನು ಹಾಗೂ ಮುಸ್ತಫಾ, ಶಿಕ್ಷಕಿಯರಾದ ಅನಿಶಾ, ನಂದಿನಿ, ಆಶಾ ಕಾರ್ಯಕರ್ತರಾದ ವಿನೋದಾ, ಶೀಲಾಕ್ಷಿ ಮೊದಲಾದವರಿದ್ದರು. ತಂಡ ನಾಯಕಿ ಫಿಲೋಮಿನಾ ಸ್ವಾಗತಿಸಿ, ವಂದಿಸಿದರು.
